IND vs ENG: ಆಂಗ್ಲರನ್ನು ಕಾಡಿದ ರಾಹುಲ್- ಗಿಲ್; 4ನೇ ದಿನದಾಟದಂತ್ಯಕ್ಕೆ ಭಾರತ 174/2

Manchester Test: ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ, ಭಾರತ ಎರಡು ವಿಕೆಟ್ ನಷ್ಟದೊಂದಿಗೆ 174 ರನ್ ಗಳಿಸಿದೆ. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್ ಗಳಿಸಿ 311 ರನ್‌ಗಳ ಅಮೂಲ್ಯವಾದ ಮುನ್ನಡೆ ಸಾಧಿಸಿದೆ. ಕೆ.ಎಲ್. ರಾಹುಲ್ (87) ಮತ್ತು ಶುಭ್‌ಮನ್ ಗಿಲ್ (78) ಅವರ ಅರ್ಧಶತಕದ ಬಲದಿಂದ ತಂಡವನ್ನು ಸೋಲಿನಿಂದ ಪಾರು ಮಾಡಲು ಪ್ರಯತ್ನಿಸುತ್ತಿದ್ದಾರೆ.

IND vs ENG: ಆಂಗ್ಲರನ್ನು ಕಾಡಿದ ರಾಹುಲ್- ಗಿಲ್; 4ನೇ ದಿನದಾಟದಂತ್ಯಕ್ಕೆ ಭಾರತ 174/2
Gill, Rahul

Updated on: Jul 26, 2025 | 11:25 PM

ಇಂಗ್ಲೆಂಡ್ ಹಾಗೂ ಭಾರತ (India vs England) ನಡುವಿನ ಮ್ಯಾಂಚೆಸ್ಟರ್ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಾಟ ಅಂತ್ಯವಾಗಿದ್ದು, ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ತಂಡ ಎರಡು ವಿಕೆಟ್‌ ಕಳೆದುಕೊಂಡು 174 ರನ್ ಗಳಿಸಿದೆ. ಆದಾಗ್ಯೂ ಭಾರತ ತಂಡ ಪ್ರಸ್ತುತ ಆತಿಥೇಯರಿಗಿಂತ 137 ರನ್‌ಗಳ ಹಿಂದಿದೆ. ಇಂಗ್ಲೆಂಡ್‌ 669 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿ, 311 ರನ್​ಗಳ ಮುನ್ನಡೆ ಪಡೆದುಕೊಂಡಿತು. ಇದೀಗ ಎರಡನೇ ಇನ್ನಿಂಗ್ಸ್ ಬಾರಿಸಿರುವ ಭಾರತದ ಪರ ಕೆಎಲ್ ರಾಹುಲ್ (KL Rahul) 87 ರನ್‌ ಮತ್ತು ಶುಭ್‌ಮನ್ ಗಿಲ್ (Shubman Gill) 78 ರನ್‌ ಬಾರಿಸಿ ಕೊನೆಯ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸತತ 2 ಎಸೆತಗಳಲ್ಲಿ 2 ವಿಕೆಟ್

ಭಾರತಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಸಿಗಲಿಲ್ಲ. ಕ್ರಿಸ್ ವೋಕ್ಸ್ ಮೊದಲ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇಬ್ಬರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆರಂಭಿಕ ರಾಹುಲ್ ಜೊತೆಯಾದ ನಾಯಕ ಶುಭ್​ಮನಗ ಗಿಲ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇಬ್ಬರು ಅರ್ಧಶತಕ ಸಿಡಿಸುವ ಮೂಲಕ ದಾಖಲೆಯ 174 ರನ್​ಗಳ ಜೊತೆಯಾಟ ನಡೆಸಿದ್ದಾರೆ.

174 ರನ್​ಗಳ ಜೊತೆಯಾಟ

ದಿನದಾಟದ ಮೊದಲ ಸೆಷನ್ ಇಂಗ್ಲೆಂಡ್ ಪಾಲಾಗಿತ್ತು. ಆದರೆ ಉಳಿದೆರಡು ಸೆಷನ್​ಗಳನ್ನು ಭಾರತ ತನ್ನ ಖಾತೆಗೆ ಹಾಕಿಕೊಂಡಿತು. ಎರಡನೇ ಮತ್ತು ಮೂರನೇ ಸೆಷನ್‌ಗಳಲ್ಲಿ ಭಾರತ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಕೆಎಲ್ ರಾಹುಲ್ ಮತ್ತು ಶುಭ್‌ಮನ್ ಗಿಲ್ ಬಹಳ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ತಂಡವನ್ನು ವಿಕೆಟ್‌ಗಳಿಗಾಗಿ ಹಾತೊರೆಯುವಂತೆ ಮಾಡಿದರು. ರಾಹುಲ್ 210 ಎಸೆತಗಳಲ್ಲಿ 87 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರೆ, ನಾಯಕ ಗಿಲ್ 167 ಎಸೆತಗಳಲ್ಲಿ 78 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಭಾನುವಾರದ ಐದನೇ ದಿನವೂ ಇಬ್ಬರೂ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ಇದು ಸಾಧ್ಯವಾದರೆ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ.

IND vs ENG: ದಶಕದ ನಂತರ ಬೇಡದ ದಾಖಲೆಗೆ ಕೊರಳೊಡ್ಡಿದ ಟೀಂ ಇಂಡಿಯಾ

669 ರನ್​ಗಳಿಗೆ ಇಂಗ್ಲೆಂಡ್ ಆಲೌಟ್

ಇದಕ್ಕೂ ಮೊದಲು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 669 ರನ್‌ಗಳಿಗೆ ಅಂತ್ಯವಾಯಿತು. ಈ ರೀತಿಯಾಗಿ, ಆತಿಥೇಯರು ಭಾರತಕ್ಕಿಂತ 311 ರನ್‌ಗಳ ಮುನ್ನಡೆ ಸಾಧಿಸಿದರು. ಇಂಗ್ಲೆಂಡ್ ಪರ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದರು. ಅದೇ ಸಮಯದಲ್ಲಿ, ಭಾರತ ಪರ ರವೀಂದ್ರ ಜಡೇಜಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 pm, Sat, 26 July 25