ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಇದೇ ವೇಳೆ ಸತತ ಮಳೆಯಾಗಿದ್ದು, ಇದರಿಂದ ಪಂದ್ಯ ಆರಂಭವಾಗಿರಲಿಲ್ಲ.
ಮಳೆ ನಿಂತ ಬಳಿಕ ಮೈದಾನವನ್ನು ಪರಿಶೀಲಿಸಿದ ಅಂಪೈರ್ಗಳು, ಔಟ್ ಫೀಲ್ಡ್ಗಳು ಒದ್ದೆಯಾಗಿರುವ ಕಾರಣ ಪಂದ್ಯ ನಡೆಸಲು ಸೂಕ್ತವಲ್ಲ ಎಂದು ತಿಳಿಸಿದರು. ಹೀಗಾಗಿ ಭಾರತ-ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಉಭಯ ತಂಡಗಳಿಗೂ ಈ ಅಭ್ಯಾಸ ಪಂದ್ಯವು ಅತ್ಯವಶ್ಯಕವಾಗಿತ್ತು. ಏಕೆಂದರೆ ಈ ಬಾರಿಯ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಗುರುತಿಸಿಕೊಂಡಿದೆ. ಅಲ್ಲದೆ ಅಕ್ಟೋಬರ್ 29 ರಂದು ನಡೆಯಲಿರುವ ವಿಶ್ವಕಪ್ ಪೈಪೋಟಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಅದಕ್ಕೂ ಮುನ್ನ ಎದುರಾಳಿ ತಂಡದ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೂಡಲು ಎರಡೂ ತಂಡಗಳು ಪ್ಲ್ಯಾನ್ ರೂಪಿಸಿತ್ತು. ಆದರೀಗ ಈ ಯೋಜನೆಗಳೆಲ್ಲಾ ಮಳೆಗೆ ಅಹುತಿಯಾಗಿದೆ.
ಭಾರತ ತಂಡವು ತನ್ನ 2ನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 3 ರಂದು ಆಡಲಿದೆ. ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಇನ್ನು ಇಂಗ್ಲೆಂಡ್ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 2 ರಂದು ಬಾಂಗ್ಲಾದೇಶ್ ವಿರುದ್ಧ ಆಡಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಇದನ್ನೂ ಓದಿ: ಈ ಸಲ ವಿಶ್ವಕಪ್ ನಮ್ದೆ: ಟೀಮ್ ಇಂಡಿಯಾ ಅಭಿಮಾನಿಗಳ ಹೀಗೊಂದು ಲೆಕ್ಕಾಚಾರ
ಇಂಗ್ಲೆಂಡ್ ತಂಡ: ಡೇವಿಡ್ ಮಲಾನ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ರೀಸ್ ಟೋಪ್ಲಿ, ಮಾರ್ಕ್ ವುಡ್.