
ಕ್ರಿಕೆಟ್ನಲ್ಲಿ ಒಂದು ಕ್ಯಾಚ್ ಕೈಚೆಲ್ಲುವುದು ಎಷ್ಟು ದುಬಾರಿಯಾಗುತ್ತೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯ ನಮ್ಮ ಕಣ್ಣ ಮುಂದೆ ಇದೆ. 19 ರನ್‌ಗಳ ವೈಯಕ್ತಿಕ ಸ್ಕೋರ್ನಲ್ಲಿ ಹ್ಯಾರಿ ಬ್ರೂಕ್ (Harry Brook) ನೀಡಿದ ಸುಲಭ ಕ್ಯಾಚ್ ಅನ್ನು ಮೊಹಮ್ಮದ್ ಸಿರಾಜ್ (Mohammed Siraj) ಕೈಚೆಲ್ಲಿದರು. ಇದರ ಲಾಭ ಪಡೆದ ಹ್ಯಾರಿ ಬ್ರೂಕ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದಾರೆ. ಇತ್ತ ಸಿರಾಜ್ ಕೈಚೆಲ್ಲಿದ ಅದೊಂದು ಕ್ಯಾಚ್ ತಂಡವನ್ನು ಸೋಲಿನ ದವಡೆಗೆ ತಳ್ಳಿದೆ.
ಜೀವದಾನ ಸಿಕ್ಕ ಬಳಿಕ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಹ್ಯಾರಿ ಬ್ರೂಕ್ ಅದ್ಭುತ ಶತಕ ಬಾರಿಸಿದ್ದಾರೆ. ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನೀಡಿದ 374 ರನ್‌ಗಳ ಗುರಿಗೆ ಉತ್ತರವಾಗಿ, ಬ್ರೂಕ್ ಪಂದ್ಯದ ನಾಲ್ಕನೇ ದಿನದಂದು ಅದ್ಭುತ ಶತಕ ಗಳಿಸಿ ಇಂಗ್ಲೆಂಡ್ ತಂಡವನ್ನು ಗೆಲುವಿನ ಹತ್ತಿರಕ್ಕೆ ಕರೆತಂದಿದ್ದಾರೆ. ಈ ಸರಣಿಯ ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್‌ಗಳಿಗೆ ಔಟಾಗಿದ್ದ ಬ್ರೂಕ್ ಇದೀಗ ಸರಣಿಯ ಕೊನೆಯ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿದ್ದಾರೆ. ಕೇವಲ 91 ಎಸೆತಗಳಲ್ಲಿ ಶತಕ ಪೂರೈಸಿದ ಬ್ರೂಕ್ಗೆ ಇದು ಅವರ ಟೆಸ್ಟ್ ವೃತ್ತಿಜೀವನದ 10 ನೇ ಶತಕವಾಗಿದೆ.
ಓವಲ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, 50 ರನ್ಗಳಿಂದ ಆಟವನ್ನು ಮುಂದುವರೆಸಿ ಇಂಗ್ಲೆಂಡ್ ಪರ ಆರಂಭಿಕ ಬೆನ್ ಡಕೆಟ್ ಬೇಗನೆ ತನ್ನ ಅರ್ಧಶತಕವನ್ನು ಪೂರೈಸಿದರು. ಆದರೆ ಟೀಂ ಇಂಡಿಯಾ ಶೀಘ್ರದಲ್ಲೇ ಡಕೆಟ್ ಮತ್ತು ನಂತರ ಓಲಿ ಪೋಪ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಆತಿಥೇಯರನ್ನು ಹಿನ್ನಡೆಗೆ ತಳ್ಳಿತು. ಕೇವಲ 106 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆಗೆ ಎಂಟ್ರಿಕೊಟ್ಟ ಬ್ರೂಕ್, ಜೋ ರೂಟ್ ಅವರೊಂದಿಗೆ ಗೆಲುವಿನ ಜೊತೆಯಾಟ ಕಟ್ಟಿದರು.
IND vs ENG: ಕ್ಯಾಚ್ ಹಿಡಿದು ಮೈಮರೆತ ಸಿರಾಜ್! ಸಿಕ್ಸ್ ನೀಡಿದ ಅಂಪೈರ್; ಶಾಕಿಂಗ್ ವಿಡಿಯೋ ನೋಡಿ
ಶತಕ ಬಾರಿಸುವುದರೊಂದಿಗೆ ಹ್ಯಾರಿ ಬ್ರೂಕ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಎರಡನೇ ಸೆಷನ್‌ನಲ್ಲಿಯೇ ಇಂಗ್ಲೆಂಡ್ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಆಕಾಶ್ ದೀಪ್ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸಲು ಪ್ರಯತ್ನಿಸುವಾಗ ಅವರ ಇನ್ನಿಂಗ್ಸ್ ಇಲ್ಲಿ ಕೊನೆಗೊಂಡಿತು. ಅಂತಿಮವಾಗಿ ಬ್ರೂಕ್ ಕೇವಲ 98 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು 2 ಸಿಕ್ಸರ್ ಸಹಿತ111 ರನ್ ಗಳಿಸಿ ಔಟಾದರು. ಒಟ್ಟಾರೆಯಾಗಿ, ಮಿಸ್ ಕ್ಯಾಚ್‌ನಿಂದ ಔಟ್ ಆಗುವವರೆಗೆ, ಬ್ರೂಕ್ ತಮ್ಮ ಮತ್ತು ಇಂಗ್ಲೆಂಡ್ ಖಾತೆಗೆ 92 ರನ್‌ಗಳನ್ನು ಸೇರಿಸಿದರು. ಅಲ್ಲದೆ ಜೋ ರೂಟ್ ಅವರೊಂದಿಗೆ ಬ್ರೂಕ್ 195 ರನ್‌ಗಳ ಪಂದ್ಯವನ್ನು ಬದಲಾಯಿಸುವ ಪಾಲುದಾರಿಕೆಯನ್ನು ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ