AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಟೀಂ ಇಂಡಿಯಾ ವಿರುದ್ಧ ಹ್ಯಾಟ್ರಿಕ್ ಶತಕ ಬಾರಿಸಿದ ಜೋ ರೂಟ್

Joe Root's Century: ಓವಲ್ ಟೆಸ್ಟ್‌ನಲ್ಲಿ ಜೋ ರೂಟ್ ಭಾರತದ ವಿರುದ್ಧ ಮತ್ತೊಂದು ಅದ್ಭುತ ಶತಕ ಸಿಡಿಸಿದ್ದಾರೆ. ಇದು ಅವರ ಟೆಸ್ಟ್ ವೃತ್ತಿಜೀವನದ 39ನೇ ಮತ್ತು ಭಾರತದ ವಿರುದ್ಧ 13ನೇ ಶತಕವಾಗಿದೆ. ಈ ಶತಕದೊಂದಿಗೆ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 6000 ರನ್ ಪೂರ್ಣಗೊಳಿಸಿದ್ದಾರೆ. ಟೆಸ್ಟ್ ಶತಕಗಳ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನಕ್ಕೇರಿದ್ದಾರೆ.

IND vs ENG: ಟೀಂ ಇಂಡಿಯಾ ವಿರುದ್ಧ ಹ್ಯಾಟ್ರಿಕ್ ಶತಕ ಬಾರಿಸಿದ ಜೋ ರೂಟ್
Joe Root
ಪೃಥ್ವಿಶಂಕರ
|

Updated on: Aug 03, 2025 | 9:56 PM

Share

ಓವಲ್ ಟೆಸ್ಟ್‌ನಲ್ಲಿ (Oval Test) ಆತಿಥೇಯ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಜೋ ರೂಟ್ (Joe Root) ಟೀಮ್ ಇಂಡಿಯಾ ವಿರುದ್ಧ ಮತ್ತೊಮ್ಮೆ ಶತಕ ಬಾರಿಸಿದ್ದಾರೆ. ಲಾರ್ಡ್ಸ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಶತಕ ಬಾರಿಸಿದ್ದ ರೂಟ್, ಇದೀಗ ಓವಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಸಿಡಿಸಿದ್ದಾರೆ. 137 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ ಶತಕ ಪೂರೈಸಿದ ರೂಟ್ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಸಹ ನಿರ್ಮಿಸಿದ್ದಾರೆ. ಇದಲ್ಲದೆ ರೂಟ್, ಹ್ಯಾರಿ ಬ್ರೂಕ್ ಅವರೊಂದಿಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಈ ಶತಕ ಜೋ ರೂಟ್ ಅವರ ಟೆಸ್ಟ್ ವೃತ್ತಿಜೀವನದಲ್ಲಿ 39 ನೇ ಶತಕವಾಗಿದ್ದು, ಈ ಟೆಸ್ಟ್ ಸರಣಿಯಲ್ಲಿ ಅವರು ಹ್ಯಾಟ್ರಿಕ್ ಶತಕಗಳನ್ನು ಸಹ ಪೂರ್ಣಗೊಳಿಸಿದ್ದಾರೆ.

ಭಾರತದ ವಿರುದ್ಧ 13ನೇ ಶತಕ

ಟೀಂ ಇಂಡಿಯಾ ವಿರುದ್ಧ ಜೋ ರೂಟ್ ಅವರ 13 ನೇ ಶತಕ ಇದಾಗಿದೆ. ಈ ಮೂಲಕ ರೂಟ್ ಟೀಂ ಇಂಡಿಯಾ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 104 ರನ್‌ಗಳ ಇನ್ನಿಂಗ್ಸ್ ಆಡಿದ್ದ ರೂಟ್, ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್ ಬಾರಿಸಿದ್ದರು. ಈಗ ಅವರು ಓವಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿ ಇಂಗ್ಲೆಂಡ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ.

WTCಯಲ್ಲಿ 6000 ರನ್‌ ಪೂರ್ಣ

ಓವಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಜೋ ರೂಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ 6000 ರನ್‌ಗಳನ್ನು ಪೂರ್ಣಗೊಳಿಸಿದರು. 69 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ ರೂಟ್, 53.27 ಸರಾಸರಿಯಲ್ಲಿ 21 ಶತಕಗಳು ಮತ್ತು 22 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ, WTC ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಇದ್ದು, ಅವರು 55 ಟೆಸ್ಟ್ ಪಂದ್ಯಗಳಲ್ಲಿ 13 ಶತಕಗಳು ಮತ್ತು 19 ಅರ್ಧಶತಕಗಳ ಸಹಾಯದಿಂದ 4278 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಇದ್ದು, ಆಡಿರುವ 53 ಟೆಸ್ಟ್ ಪಂದ್ಯಗಳಲ್ಲಿ 11 ಶತಕಗಳು ಮತ್ತು 22 ಅರ್ಧಶತಕಗಳ ಸಹಾಯದಿಂದ 4225 ರನ್ ಗಳಿಸಿದ್ದಾರೆ.

IND vs ENG: ಮ್ಯಾಂಚೆಸ್ಟರ್​ನಲ್ಲಿ ಭಾರತದ ವಿರುದ್ಧ ದಾಖಲೆಯ ಶತಕ ಸಿಡಿಸಿದ ಜೋ ರೂಟ್

ಶತಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಜೋ ರೂಟ್ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 158 ಪಂದ್ಯಗಳ 288 ಇನ್ನಿಂಗ್ಸ್‌ಗಳಲ್ಲಿ ರೂಟ್ 39 ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಅವರು ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿದ್ದಾರೆ. ಸಂಗಕ್ಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ 38 ಶತಕಗಳನ್ನು ಸಿಡಿಸಿದ್ದಾರೆ.

ಈ ಪಟ್ಟಿಯಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು 51 ಶತಕಗಳನ್ನು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಜಾಕ್ವೆಸ್ ಕಾಲಿಸ್ ಎರಡನೇ ಸ್ಥಾನದಲ್ಲಿದ್ದು, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 45 ಶತಕಗಳನ್ನು ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಟೆಸ್ಟ್‌ನಲ್ಲಿ 41 ಶತಕಗಳನ್ನು ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ