IND vs ENG: ಜೋ ರೂಟ್ ಶತಕ; ಬೃಹತ್ ಮುನ್ನಡೆಯತ್ತ ಇಂಗ್ಲೆಂಡ್
India vs England 4th Test: ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ಅದ್ಭುತ ಪ್ರದರ್ಶನ ನೀಡಿದೆ. ಜೋ ರೂಟ್ ಅವರ ಶತಕದ ಸಹಾಯದಿಂದ ಇಂಗ್ಲೆಂಡ್ ಭಾರೀ ಮುನ್ನಡೆ ಸಾಧಿಸಿದೆ. ಭಾರತೀಯ ಬೌಲರ್‌ಗಳು ಹೆಚ್ಚಿನ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್ ಗಳಿಸಿದ್ದು, ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ ಮೂರನೇ ದಿನದಂತ್ಯಕ್ಕೆ ಏಳು ವಿಕೆಟ್ ಕಳೆದುಕೊಂಡು 544 ರನ್ ಗಳಿಸಿದೆ. ಈ ಮೂಲಕ ಇಂಗ್ಲೆಂಡ್ 186 ರನ್‌ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಪರ ಜೋ ರೂಟ್ (Joe Root) ಅತಿ ಹೆಚ್ಚು 150 ರನ್ ಗಳಿಸಿದರೆ, ನಾಯಕ ಬೆನ್ ಸ್ಟೋಕ್ಸ್ ಅಜೇಯ ಅರ್ಧಶತಕ ಬಾರಿಸಿದ್ದಾರೆ. ಭಾರತ ಪರ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದಿದ್ದಾರೆ.
ಮೊದಲ ಸೆಷನ್‌ನಲ್ಲಿ ವಿಕೆಟ್ ಇಲ್ಲ
2ನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 225 ರನ್ ಕಲೆಹಾಕಿದ್ದ ಇಂಗ್ಲೆಂಡ್ ಇಲ್ಲಿಂದ ತನ್ನ ಮೂರನೇ ದಿನದಾಟವನ್ನು ಮುಂದುವರೆಸಿತು. ಇತ್ತ ಪಂದ್ಯದ ಮೂರನೇ ದಿನದಂದು ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು, ಆದರೆ ಮೊದಲ ಸೆಷನ್‌ನಲ್ಲಿ ಭಾರತೀಯ ಬೌಲರ್‌ಗಳು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ, ಜೋ ರೂಟ್ ಮತ್ತು ಓಲಿ ಪೋಪ್ ಭಾರತೀಯ ತಂಡಕ್ಕೆ ಯಾವುದೇ ಅವಕಾಶ ನೀಡಲಿಲ್ಲ. ರೂಟ್ 99 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ ಅರ್ಧಶತಕವನ್ನು ಪೂರೈಸಿದರೆ, ಪೋಪ್ 93 ಎಸೆತಗಳಲ್ಲಿ 50 ರನ್‌ಗಳ ಗಡಿ ತಲುಪಿದರು.
ಶತಕ ಬಾರಿಸಿದ ರೂಟ್
ಊಟದ ಬಳಿಕ ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದು ತಂಡಕ್ಕೆ ಕೊಂಚ ನಿರಾಳತೆ ತಂದರು. ಸುಂದರ್ ಮೊದಲು 71 ರನ್ ಗಳಿಸಿದ್ದ ಓಲಿ ಪೋಪ್ ಅವರನ್ನು ಔಟ್ ಮಾಡಿದರು. ಈ ವೇಳೆ ಪೋಪ್ ಮತ್ತು ಜೋ ರೂಟ್ ನಡುವೆ ಮೂರನೇ ವಿಕೆಟ್‌ಗೆ 144 ರನ್‌ಗಳ ಪಾಲುದಾರಿಕೆ ಇತ್ತು. ನಂತರ ಸುಂದರ್ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಇಲ್ಲಿಂದ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಇನ್ನಿಂಗ್ಸ್ ನಿಭಾಯಿಸಿ ಶತಕದ ಜೊತೆಯಾಟ ನೀಡಿದರು. ರೂಟ್ 178 ಎಸೆತಗಳಲ್ಲಿ ಶತಕ ಪೂರೈಸಿದರೆ, ಮತ್ತೊಂದೆಡೆ ಬೆನ್ ಸ್ಟೋಕ್ಸ್ 97 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆದಾಗ್ಯೂ, ಸ್ಟೋಕ್ಸ್ 66 ರನ್ ಗಳಿಸಿದಾಗ ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರ ನಡೆದರು.
IND vs ENG: ಮ್ಯಾಂಚೆಸ್ಟರ್ನಲ್ಲಿ ಭಾರತದ ವಿರುದ್ಧ ದಾಖಲೆಯ ಶತಕ ಸಿಡಿಸಿದ ಜೋ ರೂಟ್
ಬೃಹತ್ ಮೊತ್ತದತ್ತ ಇಂಗ್ಲೆಂಡ್
ಆ ಬಳಿಕ ಇನ್ನಿಂಗ್ಸ್ ನಿಭಾಯಿಸಿದ ಜೋ ರೂಟ್ 150 ರನ್ ಬಾರಿಸಿ ರವೀಂದ್ರ ಜಡೇಜಾಗೆ ಬಲಿಯಾದರು. ರೂಟ್ 248 ಎಸೆತಗಳಲ್ಲಿ 14 ಬೌಂಡರಿಗಳನ್ನು ಬಾರಿಸಿದರು. ಜೇಮೀ ಸ್ಮಿತ್ 9 ರನ್ ಬಾರಿಸಿ ಜಸ್ಪ್ರೀತ್ ಬುಮ್ರಾಗೆ ಬಲಿಯಾದರು. ನಂತರ ಮೊಹಮ್ಮದ್ ಸಿರಾಜ್ ಕ್ರಿಸ್ ವೋಕ್ಸ್ (4 ರನ್) ಅವರನ್ನು ಪೆವಿಲಿಯನ್ಗಟ್ಟಿದರು. ವೋಕ್ಸ್ ಔಟಾದ ನಂತರ, ಬೆನ್ ಸ್ಟೋಕ್ಸ್ ಮತ್ತೆ ಬ್ಯಾಟಿಂಗ್ ಮಾಡಲು ಬಂದಿದ್ದು ಲಿಯಾಮ್ ಡಾಸನ್ ಒಟ್ಟಿಗೆ ಅಜೇಯ ಆಟ ಮುಂದುವರೆಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 pm, Fri, 25 July 25
