IND vs ENG: ಮ್ಯಾಂಚೆಸ್ಟರ್‌ನಲ್ಲಿ ಭಾರತದ ವಿರುದ್ಧ ದಾಖಲೆಯ ಶತಕ ಸಿಡಿಸಿದ ಜೋ ರೂಟ್
Joe Root's Record-Breaking Century: ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅದ್ಭುತ ಶತಕ ಬಾರಿಸಿದ್ದಾರೆ.ರೂಟ್ ತಮ್ಮ 38ನೇ ಟೆಸ್ಟ್ ಶತಕವನ್ನು ಬಾರಿಸಿ ಕುಮಾರ್ ಸಂಗಕ್ಕಾರರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಲ್ಲದೆ, ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕಗಳ ದಾಖಲೆಯನ್ನೂ ಅವರು ಮುರಿದಿದ್ದಾರೆ. ಭಾರತದ ವಿರುದ್ಧ ಅವರ 12ನೇ ಶತಕ ಇದಾಗಿದೆ.

ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ (Manchester Test) ಆತಿಥೇಯ ಇಂಗ್ಲೆಂಡ್ ಸಂಪೂರ್ಣವಾಗಿ ಭಾರತದ ಮೇಲೆ ಹಿಡಿತ ಸಾಧಿಸಿದೆ ಎನ್ನಬಹುದು. ಟೀಂ ಇಂಡಿಯಾವನ್ನು 358 ರನ್ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್, ಮೊದಲ ಇನ್ನಿಂಗ್ಸ್ನಲ್ಲಿ ಈಗಾಗಲೇ 400 ರನ್‌ಗಳ ಗಡಿ ದಾಟಿದೆ. ತಂಡವನ್ನು ಇಷ್ಟು ಬೃಹತ್ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಮಾಜಿ ನಾಯಕ ಜೋ ರೂಟ್ (Joe Root) ಅವರ ಪಾತ್ರ ಅಪಾರವಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿರುವ ಜೋ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 38 ನೇ ಶತಕವನ್ನು ಪೂರೈಸಿದ್ದಾರೆ. 178 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ರೂಟ್, ಇದರೊಂದಿಗೆ ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ಸರಿಗಟ್ಟಿದರು.
ಇದು ಮಾತ್ರವಲ್ಲದೆ, ಈ ಸರಣಿಯಲ್ಲಿ ರೂಟ್ ಅವರ ಸತತ ಎರಡನೇ ಶತಕ ಇದಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸಪ್ಪೆ ಪ್ರದರ್ಶನ ನೀಡಿದ್ದ ರೂಟ್, ಈ ಹಿಂದೆ ನಡೆದ ಲಾರ್ಡ್ಸ್ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಫಾರ್ಮ್ ಕಂಡುಕೊಂಡಿದ್ದರು. ಈಗ ಮ್ಯಾಂಚೆಸ್ಟರ್‌ನಲ್ಲಿಯೂ 100 ರನ್‌ಗಳ ಗಡಿ ದಾಟುವ ಮೂಲಕ, ರೂಟ್ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ.
ರೂಟ್ ಬರೆದ ದಾಖಲೆಗಳಿವು
- ಇದು ಇಂಗ್ಲೆಂಡ್‌ನಲ್ಲಿ ಭಾರತ ವಿರುದ್ಧ ಜೋ ರೂಟ್ ಬಾರಿಸಿದ 9ನೇ ಶತಕವಾಗಿದೆ. ಈ ಮೂಲಕ, ರೂಟ್ ಈಗ ತವರಿನಲ್ಲಿ ಒಂದೇ ದೇಶದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್ (8) ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.
- ಲಾರ್ಡ್ಸ್ ನಂತರ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಶತಕ ಬಾರಿಸಿರುವ ಜೋ ರೂಟ್, ಇದರೊಂದಿಗೆ ಭಾರತ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ದಾಖಲಿಸಿದ ದಾಖಲೆಯನ್ನು ಮಾಡಿದ್ದಾರೆ. ರೂಟ್ ಈಗ ಭಾರತದ ವಿರುದ್ಧ 12 ಶತಕಗಳನ್ನು ಸಿಡಿಸಿದ್ದು, ಈ ಹಿಂದೆ 11 ಶತಕ ಬಾರಿಸಿದ್ದ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ.
- ತಮ್ಮ ಟೆಸ್ಟ್ ವೃತ್ತಿಜೀವನದ 38 ನೇ ಶತಕವನ್ನು ಬಾರಿಸಿರುವ ರೂಟ್, ಈ ಮೂಲಕ ಶ್ರೀಲಂಕಾದ ಮಾಜಿ ದಿಗ್ಗಜ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಂಗಕ್ಕಾರ 134 ಟೆಸ್ಟ್‌ಗಳಲ್ಲಿ 38 ಶತಕಗಳನ್ನು ಬಾರಿಸಿದ್ದರೆ, ರೂಟ್ ತಮ್ಮ157 ನೇ ಟೆಸ್ಟ್ ಪಂದ್ಯದಲ್ಲಿ ಸಾಧನೆ ಮಾಡಿದ್ದಾರೆ.
- ಇಷ್ಟೇ ಅಲ್ಲ, ರೂಟ್ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕಗಳ ದಾಖಲೆಯಲ್ಲಿ ಜ್ಯಾಕ್ ಹಾಬ್ಸ್ ಮತ್ತು ಸ್ಮಿತ್ ಅವರನ್ನು ಸರಿಗಟ್ಟಿದ್ದಾರೆ. ಇಬ್ಬರೂ ತಲಾ 12 ಶತಕಗಳನ್ನು ಸಿಡಿಸಿದ್ದು, ಸ್ಮಿತ್ ಇಂಗ್ಲೆಂಡ್ ವಿರುದ್ಧ ಮತ್ತು ಹಾಬ್ಸ್ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರು.
- ಇಷ್ಟೇ ಅಲ್ಲ, ಈ ಇನ್ನಿಂಗ್ಸ್ ಮೂಲಕ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ರೂಟ್ 13,231 ರನ್‌ಗಳೊಂದಿಗೆ ರಾಹುಲ್ ದ್ರಾವಿಡ್ ಮತ್ತು ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ.
Published On - 8:01 pm, Fri, 25 July 25
