IND vs ENG: ಮತ್ತೆ ಜೆರ್ಸಿ ತೊಟ್ಟ ವೊಕ್ಸ್: ಟೀಮ್ ಇಂಡಿಯಾ 4 ವಿಕೆಟ್ ಪಡೆಯಲೇಬೇಕು
India vs England 5th Test: ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಂದು ಅಗತ್ಯವಿದ್ದರೆ ಕ್ರಿಸ್ ವೋಕ್ಸ್ ಬ್ಯಾಟ್ ಮಾಡಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋ ರೂಟ್ ಖಚಿತಪಡಿಸಿದ್ದಾರೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಟೀಮ್ ಇಂಡಿಯಾ 35 ರನ್ಗಳ ಒಳಗೆ 4 ವಿಕೆಟ್ ಪಡೆಯಲೇಬೇಕು.

ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಐದನೇ ದಿನಕ್ಕೆ ಕಾಲಿಟ್ಟಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಗೆಲ್ಲಲು ಇಂಗ್ಲೆಂಡ್ ಇನ್ನೂ 35 ರನ್ ಕಲೆಹಾಕಬೇಕಿದೆ. ಇತ್ತ ಭಾರತ ತಂಡಕ್ಕೆ 4 ವಿಕೆಟ್‌ಗಳ ಅವಶ್ಯಕತೆ ಇದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ 3 ವಿಕೆಟ್ ಪಡೆದರೆ ಇಂಗ್ಲೆಂಡ್ ತಂಡದ ಇನಿಂಗ್ಸ್ ಅಂತ್ಯವಾಗಲಿದೆ ಎನ್ನಲಾಗಿತ್ತು.
ಆದರೆ ಗಾಯದ ಹಿನ್ನಲೆ 3ನೇ ಮತ್ತು 4ನೇ ದಿನದಾಟಗಳಿಂದ ಹೊರಗುಳಿದಿದ್ದ ಕ್ರಿಸ್ ವೋಕ್ಸ್ ಮತ್ತೆ ಜೆರ್ಸಿ ತೊಟ್ಟಿದ್ದಾರೆ. ಹೀಗಾಗಿ 5ನೇ ದಿನದಾಟದಲ್ಲಿ ಅವಶ್ಯಕತೆ ಇದ್ದರೆ ಅವರು ಬ್ಯಾಟಿಂಗ್ ಗೆ ಬರಲಿದ್ದಾರೆ.

ಇಂಗ್ಲೆಂಡ್ ತಂಡ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲಿ ಜೆರ್ಸಿ ಧರಿಸಿ ಕಾಣಿಸಿಕೊಂಡ ಕ್ರಿಸ್ ವೋಕ್ಸ್
ಗಾಯಾಳು ಕ್ರಿಸ್ ವೋಕ್ಸ್:
ಈ ಪಂದ್ಯದ ಎರಡನೇ ದಿನದಾಟದಂದು ಫೀಲ್ಡಿಂಗ್ ಮಾಡುವ ವೇಳೆ ಕ್ರಿಸ್ ವೋಕ್ಸ್ ಅವರ ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು. ಅಲ್ಲದೆ ಗಂಭೀರ ಗಾಯವಾಗಿರುವ ಕಾರಣ ಅವರು ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಬೌಲಿಂಗ್ ಸಹ ಮಾಡಿರಲಿಲ್ಲ. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 5ನೇ ಮತ್ತು 6ನೇ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಕ್ರಿಸ್ ವೋಕ್ಸ್ ಜೆರ್ಸಿ ತೊಟ್ಟು ಡ್ರೆಸ್ಸಿಂಗ್ ರೂಮ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೀಗಾಗಿ ಐದನೇ ದಿನದಾಟದಲ್ಲಿ ಕೊನೆಯ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಹಾಗಾಗಿ ಇಂಗ್ಲೆಂಡ್ ವಿರುದ್ಧ ಪಂದ್ಯ ಗೆಲ್ಲಬೇಕಿದ್ದರೆ ಟೀಮ್ ಇಂಡಿಯಾ 35 ರನ್ ಗಳ ಒಳಗೆ 4 ವಿಕೆಟ್ ಪಡೆಯಲೇಬೇಕು.
ಸ್ಕೋರ್ ವಿವರ:
ಭಾರತ ಮತ್ತು ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್ ನಲ್ಲಿ 224 ರನ್ ಕಲೆಹಾಕಿದರೆ, ಇಂಗ್ಲೆಂಡ್ 247 ರನ್ ಗಳಿಸಿತು.
ಇದನ್ನೂ ಓದಿ: 46 ವರ್ಷಗಳ ಬಳಿಕ ಟೀಮ್ ಇಂಡಿಯಾದ ಶತಕಗಳ ದಾಖಲೆ ಮುರಿದ ಯಂಗ್ ಇಂಡಿಯಾ
ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 396 ರನ್ ಗಳಿಸಿತು. ಮೊದಲ ಇನಿಂಗ್ಸ್ ನಲ್ಲಿನ 23 ರನ್ ಗಳ ಮುನ್ನಡೆಯೊಂದಿಗೆ 374 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ. ಅದರಂತೆ ಕೊನೆಯ ದಿನದಾಟದಲ್ಲಿ 35 ರನ್ ಬಾರಿಸಿದರೆ ಇಂಗ್ಲೆಂಡ್ ತಂಡ ಗೆಲ್ಲಲಿದೆ. ಇದರ ನಡುವೆ 4 ವಿಕೆಟ್ ಕಬಳಿಸಿದರೆ ಟೀಮ್ ಇಂಡಿಯಾ ವಿಜಯ ಸಾಧಿಸಬಹುದು.
