ಸಿರಾಜ್ ಮಹಾ ಎಡವಟ್ಟು… ಬರೋಬ್ಬರಿ 92 ರನ್..!
India vs England 5th Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್ ನಲ್ಲಿ 224 ರನ್ ಕಲೆಹಾಕಿದರೆ, ಇಂಗ್ಲೆಂಡ್ 247 ರನ್ ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾಗೆ ಇಂಗ್ಲೆಂಡ್ಗೆ 374 ರನ್ಗಳ ಗುರಿ ನೀಡಿದೆ.
ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮಾಡಿದ ಎಡವಟ್ಟೊಂದು ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಹ್ಯಾರಿ ಬ್ರೂಕ್ ನೀಡಿದ ಕ್ಯಾಚ್ ಹಿಡಿದ ಸಿರಾಜ್ ಬೌಂಡರಿ ಲೈನ್ ಟಚ್ ಮಾಡಿದ್ದರು. ಪರಿಣಾಮ ಕ್ಯಾಚ್ ಹಿಡಿದರೂ ಹ್ಯಾರಿ ಬ್ರೂಕ್ ನಾಟೌಟ್ ಆಗಿ ಉಳಿದರು.
19 ರನ್ ಗಳಿಸಿದ್ದ ವೇಳೆ ಸಿಕ್ಕ ಈ ಜೀವದಾನವನ್ನು ಬಳಸಿಕೊಂಡ ಹ್ಯಾರಿ ಬ್ರೂಕ್ ಆ ಬಳಿಕ ಕಲೆಹಾಕಿದ್ದು ಬರೋಬ್ಬರಿ 92 ರನ್ಗಳು. ಅಲ್ಲದೆ ಜೋ ರೂಟ್ ಜೊತೆಗೂಡಿ ಶತಕದ ಜೊತೆಯಾಟವಾಡಿದರು.
ಇದರೊಂದಿಗೆ ನಾಲ್ಕನೇ ದಿನದಾಟದಲ್ಲಿ ಕೇವಲ 98 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ ಗಳೊಂದಿಗೆ 111 ರನ್ ಬಾರಿಸಿದರು. ಹ್ಯಾರಿ ಬ್ರೂಕ್ ಸಿಡಿಸಿದ ಈ ಭರ್ಜರಿ ಸೆಂಚುರಿ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ.
ಇನ್ನು 5ನೇ ದಿನದಾಟದಲ್ಲಿ 35 ರನ್ ಗಳಿಸಿದರೆ ಗೆಲುವು ಇಂಗ್ಲೆಂಡ್ ಪಾಲಾಗಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ 4 ವಿಕೆಟ್ ಕಬಳಿಸಿದರೆ ಜಯವನ್ನು ತನ್ನದಾಗಿಸಿಕೊಳ್ಳಬಹುದು. ಹೀಗಾಗಿ ಐದನೇ ದಿನದಾಟದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

