U-19 Asia Cup 2024: ಅಮಾನ್ ಅಜೇಯ ಶತಕ; 339 ರನ್ ಚಚ್ಚಿದ ಟೀಂ ಇಂಡಿಯಾ

|

Updated on: Dec 02, 2024 | 2:56 PM

U-19 Asia Cup 2024: ಭಾರತದ ಅಂಡರ್-19 ತಂಡವು ಶಾರ್ಜಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಮೊಹಮ್ಮದ್ ಅಮಾನ್ ಅಜೇಯ 122 ರನ್‌, ಆಯುಷ್ ಮ್ಹಾತ್ರೆ (54) ಮತ್ತು ಕೆ.ಪಿ. ಕಾರ್ತಿಕೇಯ (57) ಅವರ ಅರ್ಧಶತಕದ ನೆರವಿನಿಂದ 339 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿದೆ.

U-19 Asia Cup 2024: ಅಮಾನ್ ಅಜೇಯ ಶತಕ; 339 ರನ್ ಚಚ್ಚಿದ ಟೀಂ ಇಂಡಿಯಾ
ಮೊಹಮ್ಮದ್ ಅಮಾನ್
Follow us on

ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ 2024 ರ ಎಂಟನೇ ಪಂದ್ಯದಲ್ಲಿ ಟೀಂ ಇಂಡಿಯಾ, ಜಪಾನ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊಹಮ್ಮದ್ ಅಮಾನ್ ಅವರ ಅಜೇಯ ಶತಕದ ಬಲದಿಂದ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ಅಮಾನ್ ಅಲ್ಲದೆ ವಸೈಕರ್ ಆಯುಷ್ ಮ್ಮಾತ್ರೆ ಮತ್ತು ಕೆಪಿ ಕಾರ್ತಿಕೇಯ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇವರ ಜೊತೆಗೆ ತಂಡದ ಇತರ ಬ್ಯಾಟ್ಸ್‌ಮನ್‌ಗಳು ನೀಡಿದ ಅಲ್ಪ ಕಾಣಿಕೆಯ ನೆರವಿನಿಂದ ತಂಡ 300 ರ ಗಡಿ ದಾಟಿತು.

ಭಾರತಕ್ಕೆ ಉತ್ತಮ ಆರಂಭ

ಈ ಪಂದ್ಯದಲ್ಲಿ ಜಪಾನ್ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಟೀಂ ಇಂಡಿಯಾ ಪರ ಮತ್ತೊಮ್ಮೆ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವಿಫಲರಾಗಿದ್ದ ಈ ಜೋಡಿ ಜಪಾನ್ ವಿರುದ್ಧ ಮೊದಲ ವಿಕೆಟ್​ಗೆ 65 ರನ್​ಗಳ ಜೊತೆಯಾಟ ನೀಡಿತು. ಆದರೆ ವೈಭವ್ ಸೂರ್ಯವಂಶಿಗೆ ಉತ್ತಮ ಆರಂಭದ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಪಾಕ್ ವಿರುದ್ಧ ಒಂದಂಕಿಗೆ ಸುಸ್ತಾಗಿದ್ದ ವೈಭವ್ ಸೂರ್ಯವಂಶಿ, ಜಪಾನ್ ವಿರುದ್ಧ 23 ರನ್ ಗಳಿಸಿ ಔಟಾದರು.

ಆಯುಷ್- ಕಾರ್ತಿಕೇಯ ಅರ್ಧಶತಕ

ಆಯುಷ್ ಮ್ಹಾತ್ರೆ ಕೂಡ ಕೆಲವೇ ಓವರ್‌ಗಳ ನಂತರ ವಿಕೆಟ್ ಒಪ್ಪಿಸಿದರಾದರೂ, 54 ರನ್​ಗಳ ಅಮೋಘ ಇನ್ನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಆಂಡ್ರೆ ಸಿದ್ಧಾರ್ಥ್ 35 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ಕೆಪಿ ಕಾರ್ತಿಕೇಯ 49 ಎಸೆತಗಳಲ್ಲಿ 57 ರನ್​ಗಳ ಕಾಣಿಕೆ ನೀಡಿದರು. ಕೆಳಕ್ರಮಾಂಕದಲ್ಲಿ ಬಂದ ನಿಖಿಲ್ ಕುಮಾರ್ 17 ಎಸೆತಗಳಲ್ಲಿ 12 ರನ್ ಕಲೆಹಾಕಿದರು. ಒಂದು ಹಂತದಲ್ಲಿ ಭಾರತ 46 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು.

ಅಮಾನ್ ಅಜೇಯ ಶತಕ

ನಂತರ ಹಾರ್ದಿಕ್ ರಾಜ್ ಮತ್ತು ಮೊಹಮ್ಮದ್ ಅಮಾನ್ ಕೊನೆಯ 4 ಓವರ್​ಗಳಲ್ಲಿ 50 ರನ್​ಗಳ ಅಜೇಯ ಜೊತೆಯಾಟ ನೀಡಿದರು. ಅಂತಿಮವಾಗಿ ಮೊಹಮ್ಮದ್ ಅಮಾನ್ 118 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ ಅಜೇಯ 122 ರನ್ ಬಾರಿಸಿದರೆ, ಹಾರ್ದಿಕ್ ರಾಜ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು. ಜಪಾನ್ ಪರ ಕೀಫರ್ ಯಮಮೊಟೊ-ಲೇಕ್ ಮತ್ತು ಹ್ಯೂಗೋ ಕೆಲ್ಲಿ ತಲಾ 2 ವಿಕೆಟ್ ಪಡೆದರೆ, ಆರವ್ ತಿವಾರಿ ಮತ್ತು ಚಾರ್ಲ್ಸ್ ಹಿಂಜ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Mon, 2 December 24