WTC Final: ಭಾರತದ ಫೈನಲ್ ಹಾದಿ ಮತ್ತಷ್ಟು ಸುಗಮ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ ಪಂದ್ಯಕ್ಕೆ ದಿನಾಂಕ ನಿಗದಿಯಾಗಿದೆ. ಅದರಂತೆ ಮುಂದಿನ ವರ್ಷ ಜೂನ್ 11 ರಿಂದ 15 ರವರಗೆ WTC ಫೈನಲ್ ಪಂದ್ಯ ಜರುಗಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ಸುಗಮವಾಗಿದೆ. ಅದು ಸಹ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ಗೆಲುವಿನಿಂದಾಗಿ ಎಂಬುದು ವಿಶೇಷ. ಅಂದರೆ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಗೆಲುವು ದಾಖಲಿಸಿದರೆ, ಇತ್ತ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ತಂಡಕ್ಕೆ ಸೋಲುಣಿಸಿದೆ.
ಈ ಎರಡು ತಂಡಗಳ ಸೋಲಿನಿಂದಾಗಿ ಟೀಮ್ ಇಂಡಿಯಾಗೆ ಫೈನಲ್ಗೆ ಪ್ರವೇಶಿಸುವ ಅವಕಾಶ ಹೆಚ್ಚಾಗಿದೆ. ಅದರಂತೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯನ್ನು 5-0, 4-0, 4-1, ಅಥವಾ 3-0 ಅಂತರದಿಂದ ಗೆದ್ದುಕೊಂಡರೆ ಫೈನಲ್ ಆಡುವುದು ಖಚಿತವಾಗಲಿದೆ.
ಇತ್ತ ಟೀಮ್ ಇಂಡಿಯಾದ ಗೆಲುವುಗಳೊಂದಿಗೆ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಮೂರನೇ ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಇನ್ನುಳಿದ ಪಂದ್ಯಗಳಲ್ಲಿ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಜಯ ಸಾಧಿಸಿದರೂ ಅಂಕ ಪಟ್ಟಿಯಲ್ಲಿ ಭಾರತ ತಂಡವನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಲೆಕ್ಕಾಚಾರ:
- ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡರೆ 67% ಅಂಕಗಳೊಂದಿಗೆ ಫೈನಲ್ಗೆ ಪ್ರವೇಶಿಸುವುದು ಖಚಿತವಾಗಲಿದೆ.
- ಭಾರತ ತಂಡವು ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಪ್ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಶೇಕಡಾವಾರು ಅಂಕ 65.79 ಕ್ಕೆ ತಲುಪಲಿದೆ.
- ಟೀಮ್ ಇಂಡಿಯಾ 3-0 ಅಂತರದಿಂದ ಬಾರ್ಡರ್-ಗವಾಸ್ಕರ್ ಸರಣಿ ಗೆದ್ದರೂ 63% ಅಂಕಗಳೊಂದಿಗೆ ಫೈನಲ್ಗೆ ಪ್ರವೇಶಿಸಲಿದೆ.
- ಅತ್ತ ನ್ಯೂಝಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡರೂ 62% ಅಂಕಗಳನ್ನು ಮಾತ್ರ ಪಡೆಯಲಿದೆ.
- ಶ್ರೀಲಂಕಾ ತಂಡವು ಉಳಿದೆಲ್ಲಾ ಟೆಸ್ಟ್ ಪಂದ್ಯಗಳನ್ನು ಗೆದ್ದರೂ ಪಡೆಯುವುದು 61.53% ಅಂಕಗಳನ್ನು ಮಾತ್ರ.
ಅಂದರೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 5-0, 4-0, 4-1, ಅಥವಾ 3-0 ಅಂತರದಿಂದ ಗೆದ್ದುಕೊಂಡರೆ ಫೈನಲ್ ಆಡುವುದು ಖಚಿತವಾಗಲಿದೆ. ಏಕೆಂದರೆ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೂ ಭಾರತಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವುದಿಲ್ಲ. ಅಲ್ಲದೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಮಾತ್ರ ಈ ತಂಡಗಳಿಗೆ ಫೈನಲ್ಗೆ ಪ್ರವೇಶಿಸಲು ಅವಕಾಶವಿರಲಿದೆ.
ಸೌತ್ ಆಫ್ರಿಕಾಗೆ ಉತ್ತಮ ಚಾನ್ಸ್:
ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಸೌತ್ ಆಫ್ರಿಕಾ ತಂಡವು ಮುಂದಿನ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿದರೆ 69.44% ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಅಲ್ಲದೆ ಫೈನಲ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.
ಇತ್ತ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು 5-0 ಅಥವಾ 4-0 ಅಂತರದಿಂದ ಸೋಲಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಪ್ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಲಿದೆ. ಹೀಗಾದರೆ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗುವುದು ಕನ್ಫರ್ಮ್ ಆಗಲಿದೆ.
ಇದನ್ನೂ ಓದಿ: 15.5 ಓವರ್ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ
ಆಸ್ಟ್ರೇಲಿಯಾಗೆ ಚಾನ್ಸ್ ಇಲ್ವಾ?
ಭಾರತದ ವಿರುದ್ಧದ ಸರಣಿಯನ್ನು ಆಸ್ಟ್ರೇಲಿಯಾ 4-1, 3-1, ಅಥವಾ 3-2 ಅಂತರದಿಂದ ಗೆದ್ದುಕೊಂಡರೆ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ. ಈ ಮೂಲಕ ಟೀಮ್ ಇಂಡಿಯಾವನ್ನು ಹಿಂದಿಕ್ಕಿ ಫೈನಲ್ಗೆ ಪ್ರವೇಶಿಸಬಹುದು. ಹೀಗಾಗಿ ಭಾರತ ತಂಡದ ಪಾಲಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಿರ್ಣಾಯಕ.
Published On - 1:09 pm, Mon, 2 December 24