U-19 Asia Cup 2024: ಅಮಾನ್ ಅಜೇಯ ಶತಕ; 339 ರನ್ ಚಚ್ಚಿದ ಟೀಂ ಇಂಡಿಯಾ
U-19 Asia Cup 2024: ಭಾರತದ ಅಂಡರ್-19 ತಂಡವು ಶಾರ್ಜಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಮೊಹಮ್ಮದ್ ಅಮಾನ್ ಅಜೇಯ 122 ರನ್, ಆಯುಷ್ ಮ್ಹಾತ್ರೆ (54) ಮತ್ತು ಕೆ.ಪಿ. ಕಾರ್ತಿಕೇಯ (57) ಅವರ ಅರ್ಧಶತಕದ ನೆರವಿನಿಂದ 339 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ 2024 ರ ಎಂಟನೇ ಪಂದ್ಯದಲ್ಲಿ ಟೀಂ ಇಂಡಿಯಾ, ಜಪಾನ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊಹಮ್ಮದ್ ಅಮಾನ್ ಅವರ ಅಜೇಯ ಶತಕದ ಬಲದಿಂದ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ಅಮಾನ್ ಅಲ್ಲದೆ ವಸೈಕರ್ ಆಯುಷ್ ಮ್ಮಾತ್ರೆ ಮತ್ತು ಕೆಪಿ ಕಾರ್ತಿಕೇಯ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇವರ ಜೊತೆಗೆ ತಂಡದ ಇತರ ಬ್ಯಾಟ್ಸ್‌ಮನ್‌ಗಳು ನೀಡಿದ ಅಲ್ಪ ಕಾಣಿಕೆಯ ನೆರವಿನಿಂದ ತಂಡ 300 ರ ಗಡಿ ದಾಟಿತು.
ಭಾರತಕ್ಕೆ ಉತ್ತಮ ಆರಂಭ
ಈ ಪಂದ್ಯದಲ್ಲಿ ಜಪಾನ್ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಟೀಂ ಇಂಡಿಯಾ ಪರ ಮತ್ತೊಮ್ಮೆ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವಿಫಲರಾಗಿದ್ದ ಈ ಜೋಡಿ ಜಪಾನ್ ವಿರುದ್ಧ ಮೊದಲ ವಿಕೆಟ್ಗೆ 65 ರನ್‌ಗಳ ಜೊತೆಯಾಟ ನೀಡಿತು. ಆದರೆ ವೈಭವ್ ಸೂರ್ಯವಂಶಿಗೆ ಉತ್ತಮ ಆರಂಭದ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಪಾಕ್ ವಿರುದ್ಧ ಒಂದಂಕಿಗೆ ಸುಸ್ತಾಗಿದ್ದ ವೈಭವ್ ಸೂರ್ಯವಂಶಿ, ಜಪಾನ್ ವಿರುದ್ಧ 23 ರನ್ ಗಳಿಸಿ ಔಟಾದರು.
ಆಯುಷ್- ಕಾರ್ತಿಕೇಯ ಅರ್ಧಶತಕ
ಆಯುಷ್ ಮ್ಹಾತ್ರೆ ಕೂಡ ಕೆಲವೇ ಓವರ್‌ಗಳ ನಂತರ ವಿಕೆಟ್ ಒಪ್ಪಿಸಿದರಾದರೂ, 54 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಆಂಡ್ರೆ ಸಿದ್ಧಾರ್ಥ್ 35 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ಕೆಪಿ ಕಾರ್ತಿಕೇಯ 49 ಎಸೆತಗಳಲ್ಲಿ 57 ರನ್‌ಗಳ ಕಾಣಿಕೆ ನೀಡಿದರು. ಕೆಳಕ್ರಮಾಂಕದಲ್ಲಿ ಬಂದ ನಿಖಿಲ್ ಕುಮಾರ್ 17 ಎಸೆತಗಳಲ್ಲಿ 12 ರನ್ ಕಲೆಹಾಕಿದರು. ಒಂದು ಹಂತದಲ್ಲಿ ಭಾರತ 46 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತ್ತು.
Captain ✅Number 7 Jersey ✅Hundred in U-19 Asia Cup ✅
REMEMBER THE NAME – MOHAMED AMAAN 🇮🇳 pic.twitter.com/IbzTqnos6Z
— Johns. (@CricCrazyJohns) December 2, 2024
ಅಮಾನ್ ಅಜೇಯ ಶತಕ
ನಂತರ ಹಾರ್ದಿಕ್ ರಾಜ್ ಮತ್ತು ಮೊಹಮ್ಮದ್ ಅಮಾನ್ ಕೊನೆಯ 4 ಓವರ್ಗಳಲ್ಲಿ 50 ರನ್‌ಗಳ ಅಜೇಯ ಜೊತೆಯಾಟ ನೀಡಿದರು. ಅಂತಿಮವಾಗಿ ಮೊಹಮ್ಮದ್ ಅಮಾನ್ 118 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ ಅಜೇಯ 122 ರನ್ ಬಾರಿಸಿದರೆ, ಹಾರ್ದಿಕ್ ರಾಜ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು. ಜಪಾನ್ ಪರ ಕೀಫರ್ ಯಮಮೊಟೊ-ಲೇಕ್ ಮತ್ತು ಹ್ಯೂಗೋ ಕೆಲ್ಲಿ ತಲಾ 2 ವಿಕೆಟ್ ಪಡೆದರೆ, ಆರವ್ ತಿವಾರಿ ಮತ್ತು ಚಾರ್ಲ್ಸ್ ಹಿಂಜ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Mon, 2 December 24