IND vs NZ: ಭಾರತದ ಕಿವಿ ಹಿಂಡಿದ ಕಿವೀಸ್; ದಿನದಾಟದಂತ್ಯಕ್ಕೆ 180 ರನ್ ಚಚ್ಚಿದ ನ್ಯೂಜಿಲೆಂಡ್

IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಅಂತ್ಯಗೊಂಡಿದೆ. ಭಾರತವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಮಾಡಿದ್ದ ನ್ಯೂಜಿಲೆಂಡ್ ಉತ್ತಮ ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳಿಗೆ 180 ರನ್ ಗಳಿಸುವ ಮೂಲಕ 134 ರನ್‌ಗಳ ಮುನ್ನಡೆ ಸಾಧಿಸಿದೆ.

IND vs NZ: ಭಾರತದ ಕಿವಿ ಹಿಂಡಿದ ಕಿವೀಸ್; ದಿನದಾಟದಂತ್ಯಕ್ಕೆ 180 ರನ್ ಚಚ್ಚಿದ ನ್ಯೂಜಿಲೆಂಡ್
ನ್ಯೂಜಿಲೆಂಡ್ ತಂಡ

Updated on: Oct 17, 2024 | 5:54 PM

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಬಿಗಿ ಹಿಡಿತ ಸಾಧಿಸಿದೆ. ಪಂದ್ಯದ ಎರಡನೇ ದಿನದಲ್ಲಿ ಟೀಂ ಇಂಡಿಯಾವನ್ನು ಕೇವಲ 46 ರನ್​ಗಳಿಗೆ ಆಲೌಟ್ ಮಾಡಿದ್ದ ಲೇಥಮ್ ಪಡೆ, ಇದೀಗ ದಿನದದಾಟದಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿದೆ. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 134 ರನ್​ಗಳ ಮುನ್ನಡೆ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 22 ರನ್ ಹಾಗೂ ಡೆರಿಲ್ ಮಿಚೆಲ್ 14 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಬ್ಯಾಟಿಂಗ್ ವಿಭಾಗದ ವೈಫಲ್ಯ

ಉಭಯ ತಂಡಗಳ ನಡುವಿನ ಮೊದಲ ದಿನದಾಟ ಮಳೆಯಿಂದಾಗಿ ಟಾಸ್ ಇಲ್ಲದೇ ಕೊನೆಗೊಂಡಿತು. ಹೀಗಾಗಿ ಎರಡನೇ ದಿನ ಪಂದ್ಯವನ್ನು 15 ನಿಮಿಷ ಮುಂಚಿತವಾಗಿ ಆರಂಭಿಸಲಾಯಿತು. ಪಂದ್ಯದ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ರೋಹಿತ್ ಶರ್ಮಾ ತೆಗೆದುಕೊಂಡ ನಿರ್ಧಾರ ತಪ್ಪು ಎಂಬುದು ಕೇವಲ 10 ಓವರ್​ಗಳೊಳಗೆ ಸಾಭೀತಾಯಿತು. ಕಿವೀಸ್ ದಾಳಿಗೆ ತತ್ತರಿಸಿದ ಭಾರತದ ಬ್ಯಾಟಿಂಗ್ ಕ್ರಮಾಂಕ ಪೆವಿಲಿಯನ್ ಪರೇಡ್ ನಡೆಸಿತು. ತಂಡದ 11 ಆಟಗಾರರು ಸೇರಿ ಕೇವಲ 50 ರನ್ ಗಳಿಸಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಜೊತೆಗೆ ಬೌಲಿಂಗ್​ನಲ್ಲೂ ಟೀಂ ಇಂಡಿಯಾಗೆ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ.

ನ್ಯೂಜಿಲೆಂಡ್​ಗೆ ಅದ್ಭುತ ಆರಂಭ

ಆತಿಥೇಯ ಟೀಂ ಇಂಡಿಯಾ ಕೇವಲ 46 ರನ್​ಗಳಿಗೆ ಆಲೌಟ್ ಆಗಿದ್ದನ್ನು ಗಮನಿಸಿದವರು ನ್ಯೂಜಿಲೆಂಡ್ ಸ್ಥಿತಿಯೂ ಹೀಗೆ ಆಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಕಿವೀಸ್ ಬ್ಯಾಟ್ಸ್​ಮನ್​ಗಳು ಇದೆಲ್ಲ ಆಲೋಚನೆಗಳನ್ನು ಬುಡಮೇಲು ಮಾಡಿದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಟಾಮ್ ಲೇಥಮ್ ಹಾಗೂ ಡೆವೋನ್ ಕಾನ್ವೇ ಮೊದಲ ವಿಕೆಟ್​ಗೆ 67 ರನ್​ಗಳ ಜೊತೆಯಾಟ ನೀಡಿದರು. ಈ ವೇಳೆ 15 ರನ್ ಗಳಿಸಿ ಆಡುತ್ತಿದ್ದ ನಾಯಕ ಲೇಥಮ್​ರನ್ನು ಕುಲ್ದೀಪ್ ಯಾದವ್ ಬಲಿ ಪಡೆದರು.

ಕಾನ್ವೇ ಶತಕ ವಂಚಿತ

ಇದಾದ ನಂತರ ವಿಲ್ ಯಂಗ್ ಜೊತೆಗೆ ಕಾನ್ವೇ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ದಾಳಿಗಿಳಿದ ಜಡೇಜಾ, 33 ರನ್ ಗಳಿಸಿ ಆಡುತ್ತಿದ್ದ ವಿಲ್ ಯಂಗ್ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಶತಕದತ್ತ ಸಾಗುತ್ತಿದ್ದ ಕಾನ್ವೇ ಅವರನ್ನು ಬೌಲ್ಡ್ ಮಾಡಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತಕ್ಕೆ ಮೂರನೇ ಯಶಸ್ಸನ್ನು ತಂದುಕೊಟ್ಟು ಕಾನ್ವೇ ಶತಕ ಗಳಿಸದಂತೆ ತಡೆದರು. ಅಂತಿಮವಾಗಿ ಕಾನ್ವೆ 105 ಎಸೆತಗಳಲ್ಲಿ 11 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 91 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Thu, 17 October 24