IND vs NZ: ಮೂವರ ಅರ್ಧಶತಕ; ಕಿವೀಸ್​ಗೆ ತಕ್ಕ ತಿರುಗೇಟು ನೀಡಿದ ಟೀಂ ಇಂಡಿಯಾ

|

Updated on: Oct 18, 2024 | 5:41 PM

IND vs NZ: ಪಂದ್ಯದ ಮೂರನೇ ದಿನದ ಎರಡನೇ ಸೆಷನ್‌ನಲ್ಲಿ ಕಿವೀಸ್ ತಂಡವನ್ನು 402 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುತ್ತಿದೆ. ಕಿವೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಭಾರತದ ಬ್ಯಾಟಿಂಗ್ ವಿಭಾಗ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿದೆ.

IND vs NZ: ಮೂವರ ಅರ್ಧಶತಕ; ಕಿವೀಸ್​ಗೆ ತಕ್ಕ ತಿರುಗೇಟು ನೀಡಿದ ಟೀಂ ಇಂಡಿಯಾ
ಟೀಂ ಇಂಡಿಯಾ
Follow us on

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಬೆಂಗಳೂರು ಟೆಸ್ಟ್ ತೀವ್ರ ಕುತೂಹಲ ಘಟ್ಟಕ್ಕೆ ಸಾಗುತ್ತಿದೆ. ಪಂದ್ಯದ ಎರಡನೇ ದಿನ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದರೆ, ಮೂರನೇ ದಿನ ಟೀಂ ಇಂಡಿಯಾ ತನ್ನ ಪಾರುಪತ್ಯ ಸಾಧಿಸಿದೆ. ಪಂದ್ಯದ ಮೂರನೇ ದಿನದ ಎರಡನೇ ಸೆಷನ್‌ನಲ್ಲಿ ಕಿವೀಸ್ ತಂಡವನ್ನು 402 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುತ್ತಿದೆ. ಕಿವೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಭಾರತದ ಬ್ಯಾಟಿಂಗ್ ವಿಭಾಗ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿದೆ. ಈ ಮೂಲಕ ಇನ್ನಿಂಗ್ಸ್ ಹಿನ್ನಡೆಯನ್ನು 125 ರನ್​ಗಳಿಗೆ ತಗ್ಗಿಸಿದೆ. ಟೀಂ ಇಂಡಿಯಾ ಪರ ಇದುವರೆಗೆ ಮೂವರು ಬ್ಯಾಟ್ಸ್‌ಮನ್​ಗಳು ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ದಿಟ್ಟ ಹೋರಾಟ

ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ರೋಹಿತ್ ಮತ್ತು ಯಶಸ್ವಿ ನಡುವೆ ಮೊದಲ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವಿತ್ತು. ಯಶಸ್ವಿ 52 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ 63 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಇದಾದ ನಂತರ ವಿರಾಟ್ ಕೊಹ್ಲಿ ಮತ್ತು ಸರ್ಫರಾಜ್ ನಡುವೆ ಶತಕದ ಜೊತೆಯಾಟವಿತ್ತು. ಕೊಹ್ಲಿ 102 ಎಸೆತಗಳಲ್ಲಿ 70 ರನ್ ಬಾರಿಸಿ ದಿನದಾಟದ ಕೊನೆಯಲ್ಲಿ ಕ್ಯಾಚಿತ್ತು ಪೆವಿಲಿಯನ್​ಗೆ ಸೇರಿಕೊಂಡರು. ಸರ್ಫರಾಜ್ 78 ಎಸೆತಗಳಲ್ಲಿ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

9000 ರನ್ ಪೂರೈಸಿದ ಕೊಹ್ಲಿ

ಎರಡನೇ ಇನ್ನಿಂಗ್ಸ್​ನಲ್ಲಿ 70 ರನ್​ಗಳ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ, ಈ ಅರ್ಧಶತಕದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು 15000 ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಕೊಹ್ಲಿ  316 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ವಿರಾಟ್ ನಂತರ ರಾಹುಲ್ ದ್ರಾವಿಡ್ ಹೆಸರು ಈ ಪಟ್ಟಿಯಲ್ಲಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವಾಗ ದ್ರಾವಿಡ್ 14555 ರನ್ ಬಾರಿಸಿದ್ದರು. ಇದಲ್ಲದೆ, ವಿರಾಟ್ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು  50 ರನ್ ಗಡಿ ಮುಟ್ಟಿದ್ದು ಇದೇ ಮೊದಲು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Fri, 18 October 24