ಭಾರತ ತಂಡದ ನ್ಯೂಜಿಲೆಂಡ್ (India vs New Zealand) ಪ್ರವಾಸಕ್ಕೆ ಅಂದುಕೊಂಡ ರೀತಿಯಲ್ಲಿ ಚಾಲನೆ ಸಿಗಲಿಲ್ಲ. ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಮೊದಲ ಕದನ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ಭಾರೀ ಮಳೆಯ ನಡುವೆ ಸರಿಯಾಗಿ ಅಭ್ಯಾಸ ಕೂಡ ನಡೆಸದೆ ವೆಲ್ಲಿಂಗ್ಟನ್ಗೆ (Wellington) ಬಂದ ಟೀಮ್ ಇಂಡಿಯಾಕ್ಕೆ (Team India) ವರುಣನೇ ಸ್ವಾಗತ ಕೋರಿದ. ಎಡೆಬಿಡದೆ ಮಳೆ ಸುರಿದು ಮೈದಾನದಲ್ಲಿ ಹೆಜ್ಜೆ ಇಡಲೂ ಸಾಧ್ಯವಾಗಲಿಲ್ಲ. ಬಳಿಕ ಒಂದೂ ಎಸೆತವಿಲ್ಲದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಉಭಯ ತಂಡಗಳ ನಾಯಕರು ಪರಸ್ಪರ ಹಸ್ತಲಾಘವ ಮಾಡಿ ತಮ್ಮ ತಮ್ಮ ಹೊಟೇಲ್‌ನತ್ತ ತೆರಳಿದರು. ಆದರೀಗ ದ್ವಿತೀಯ ಟಿ20 ಪಂದ್ಯ ಕೂಡ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟಿ20 ಪಂದ್ಯ ನವೆಂಬರ್ 20 ಭಾನುವಾರದಂದು ಮೌಂಟ್ ಮೌಂಗನು ಬೇ ಓವಲ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಅದೇ ನ್ಯೂಜಿಲೆಂಡ್ ಕಾಲಮಾನದ ಪ್ರಕಾರ ಪಂದ್ಯ 7:30 PM ಗೆ ಆರಂಭವಾಗುತ್ತದೆ. ಆದರೆ, ಈ ಪಂದ್ಯಕ್ಕೆ ಕೂಡ ಮಳೆ ಅಡ್ಡಿಪಡಿಸಲಿದೆ.
ಪಂದ್ಯ ನಡೆಯುವ ದಿನ ಭಾನುವಾರ ಮೌಂಟ್ ಮೌಂಗನು ಸಿಟಿಯಲ್ಲಿ ಭಾರೀ ಮಳೆ ಆಗಲಿದೆ. ಹವಾಮಾನ ಇಲಾಖೆ ಸೂಚಿಸಿರುವ ಪ್ರಕಾರ ಪಂದ್ಯ ಆರಂಭವಾಗುವ 7 ಗಂಟೆಗೆ ಶೇ. 36 ರಷ್ಟು ಮಳೆಯ ಪ್ರಮಾಣ ಇರಲಿದೆ. ಪಂದ್ಯದ ಮಧ್ಯೆ ಶೇ. 64 ರಷ್ಟು ಮತ್ತು ಪಂದ್ಯ ಮುಗಿಯುವ ಸಮಯದಲ್ಲಿ ಶೇ. 34 ರಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯ ಪ್ರಮಾಣ ಹೇಗಿರಲಿದೆ?:
07:00 PM – 19 ಡಿಗ್ರಿ (ಶೇ. 36 ರಷ್ಟು ಮಳೆ ಆಗುವ ಸಾಧ್ಯತೆ).
08:00 PM – 18 ಡಿಗ್ರಿ (ಶೇ. 49 ರಷ್ಟು ಮಳೆ ಆಗುವ ಸಾಧ್ಯತೆ).
09:00 PM – 17 ಡಿಗ್ರಿ (ಶೇ. 64 ರಷ್ಟು ಮಳೆ ಆಗುವ ಸಾಧ್ಯತೆ.
10:00 PM – 17 ಡಿಗ್ರಿ (ಶೇ. 64 ರಷ್ಟು ಮಳೆ ಆಗುವ ಸಾಧ್ಯತೆ).
11:00 PM – 15 ಡಿಗ್ರಿ (ಶೇ. 40 ರಷ್ಟು ಮಳೆ ಆಗುವ ಸಾಧ್ಯತೆ).
00:00 AM – 15 ಡಿಗ್ರಿ (ಶೇ. 34 ರಷ್ಟು ಮಳೆ ಆಗುವ ಸಾಧ್ಯತೆ).
ಭಾರತ- ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ಆಯೋಜಿಸಲಾಗಿದೆ. ಈ ಪೈಕಿ ಮೊದಲ ಟಿ20 ಪಂದ್ಯ ಮಳೆಗೆ ಆಹುತಿಯಾಯಿತು. ಭಾರತ ಪರ ಕೆಲ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಟಿ20 ಸರಣಿಯನ್ನು ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುನ್ನಡೆಸಲಿದ್ದಾರೆ. ಶಿಖರ್ ಧವನ್ ಏಕದಿನ ಸರಣಿಗೆ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರಿಗೆ ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.
ಮುಂದಿನ ಪಂದ್ಯ ಯಾವಾಗ?:
2ನೇ T20I – ನವೆಂಬರ್ 20, ಮೌಂಟ್ ಮೌಂಗನು
3ನೇ T20I – ನವೆಂಬರ್ 22, ನೇಪಿಯರ್
ಏಕದಿನ ಸರಣಿ: ಬೆಳಗ್ಗೆ 7 ಗಂಟೆಗೆ ಆರಂಭ
ಮೊದಲ ODI – ನವೆಂಬರ್ 25, ಆಕ್ಲೆಂಡ್
ಎರಡನೇ ODI – ನವೆಂಬರ್ 27, ಹ್ಯಾಮಿಲ್ಟನ್
ಮೂರನೇ ODI – ನವೆಂಬರ್ 30, ಕ್ರೈಸ್ಟ್‌ಚರ್ಚ್
ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್.
Published On - 10:41 am, Sat, 19 November 22