FIFA World Cup: ಡೆಲ್ಲಿ ಟು ಕತಾರ್ ಫ್ಲೈಟ್ ಟಿಕೆಟ್ ಬೆಲೆಗಿಂತಲೂ ದುಬಾರಿ ಫಿಫಾ ವಿಶ್ವಕಪ್ ಟಿಕೆಟ್ ಬೆಲೆ..!
FIFA World Cup 2022: ಈ ವಿಶ್ವಕಪ್‌ನ ಫೈನಲ್ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ 686 ಪೌಂಡ್‌ಗಳು ಅಂದರೆ 66, 790 ರೂಪಾಯಿಗಳು. ಕಳೆದ ಐದು ವಿಶ್ವಕಪ್‌ಗಳಲ್ಲಿ ಇದು ಅತ್ಯಂತ ದುಬಾರಿ ಟಿಕೆಟ್ ಆಗಿದೆ.
Updated on:Nov 18, 2022 | 7:32 PM

ಭಾನುವಾರದಿಂದ ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಆರಂಭವಾಗಲಿದೆ. ಎಲ್ಲಾ ವಿವಾದಗಳ ನಡುವೆಯೇ ಕತಾರ್ ಈ ಟೂರ್ನಿಯನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದೆ. ಈ ಬಾರಿಯ ವಿಶ್ವಕಪ್ ಅನ್ನು ಅದ್ಧೂರಿಯಾಗಿ ಮಾಡಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಇದರ ಪರಿಣಾಮ ವಿಶ್ವಕಪ್ ಟಿಕೆಟ್ ದರದ ಮೇಲೂ ಗೋಚರಿಸುತ್ತಿದೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕತಾರ್ ವಿಶ್ವಕಪ್ ಟಿಕೆಟ್ ಬೆಲೆ ಇದುವರೆಗೆ ಅತ್ಯಂತ ದುಬಾರಿ ಟಿಕೆಟ್ ಬೆಲೆಯಾಗಿದೆ. 2018ಕ್ಕೆ ಹೋಲಿಸಿದರೆ ಈ ಬಾರಿ ಟಿಕೆಟ್ ದರ ಶೇ.40ರಷ್ಟು ಏರಿಕೆಯಾಗಿದೆ. ಇದರ ಹೊರತಾಗಿಯೂ, ಬಹುತೇಕ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ.

ರಷ್ಯಾದಲ್ಲಿ ನಡೆದ ಕಳೆದ ವಿಶ್ವಕಪ್‌ನಲ್ಲಿ, ಒಬ್ಬ ಅಭಿಮಾನಿ ಪಂದ್ಯದ ಟಿಕೆಟ್‌ಗಾಗಿ ಸರಾಸರಿ 214 ಪೌಂಡ್‌ಗಳನ್ನು ಅಂದರೆ 20 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಆದರೆ ಕತಾರ್‌ನಲ್ಲಿ ಟಿಕೆಟ್‌ನ ಸರಾಸರಿ ಬೆಲೆ 286 ಪೌಂಡ್‌ಗಳು ಅಂದರೆ ಸುಮಾರು 28 ಸಾವಿರ ರೂಪಾಯಿಗಳು.

ಈ ವಿಶ್ವಕಪ್‌ನ ಫೈನಲ್ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ 686 ಪೌಂಡ್‌ಗಳು ಅಂದರೆ 66, 790 ರೂಪಾಯಿಗಳು. ಕಳೆದ ಐದು ವಿಶ್ವಕಪ್‌ಗಳಲ್ಲಿ ಇದು ಅತ್ಯಂತ ದುಬಾರಿ ಟಿಕೆಟ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 59ರಷ್ಟು ಹೆಚ್ಚು. ಆದರೆ ದೆಹಲಿಯಿಂದ ಕತಾರ್ಗೆ ತೆರಳುವ ವಿಮಾನದ ಟಿಕೆಟ್‌ನ ಸರಾಸರಿ ಬೆಲೆ 50,000 ರೂ. ಆಗಿದ್ದು, ಫೈನಲ್ ಪಂದ್ಯವನ್ನು ವೀಕ್ಷಿಸಲು ಈ ವಿಮಾನದ ಟಿಕೆಟ್ ಬೆಲೆಗಿಂತಲೂ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿದೆ.

ಈ ವಿಶ್ವಕಪ್‌ನ ತಯಾರಿಯಲ್ಲಿ ಕತಾರ್ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಇದರಿಂದಾಗಿ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ವಿಶ್ವಕಪ್‌ಗಾಗಿ ಸಂಘಟಕರು ಹೊಸ ಕ್ರೀಡಾಂಗಣಗಳು, ಹೊಸ ರಸ್ತೆಗಳು ಮತ್ತು ಹೊಸ ಮೈದಾನಗಳನ್ನು ನಿರ್ಮಿಸಿರುವುದರಿಂದ ಇದಕ್ಕೆ ಶತಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.
Published On - 7:32 pm, Fri, 18 November 22
