T20 World Cup 2022: ಬ್ರಿಸ್ಬೇನ್ನಲ್ಲಿ ಇಂದು ಮಧ್ಯಾಹ್ನ ಶುರುವಾಗಬೇಕಿದ್ದ ಭಾರತ-ನ್ಯೂಜಿಲೆಂಡ್ (India vs New zealand) ನಡುವಣ ಅಭ್ಯಾಸ ಪಂದ್ಯವು ಮಳೆಯ ಕಾರಣ ವಿಳಂಬವಾಗಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30 ಕ್ಕೆ ಆರಂಭವಾಗಬೇಕಿದ್ದ ಪಂದ್ಯಕ್ಕೆ ವರುಣ ಅಡಿಯಾಗಿದ್ದು, ಹೀಗಾಗಿ ಪಂದ್ಯವು ತಡವಾಗಿ ಶುರುವಾಗುವ ಸಾಧ್ಯತೆಯಿದೆ. ಇನ್ನು ಈ ಪಂದ್ಯದ ಕಟ್ ಆಫ್ ಟೈಮ್ ಸಂಜೆ 4.16 PM. ಆ ಬಳಿಕ ಕೂಡ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗುತ್ತದೆ. ಒಂದು ವೇಳೆ ಇದರ ಮಧ್ಯೆ ಪಂದ್ಯ ಆಯೋಜಿಸಲು ಅನುಕೂಲಕರ ಸನ್ನಿವೇಶವಿದ್ದರೆ ಈ ಪಂದ್ಯವನ್ನು ಓವರ್ಗಳ ಕಡಿತದೊಂದಿಗೆ ಆರಂಭಿಸಬಹುದು.
ಇನ್ನು ಕಟ್ ಆಫ್ ಟೈಮ್ ಬಳಿಕ ಪಂದ್ಯ ಆಯೋಜಿಸುವುದಾದರೆ 5 ಓವರ್ಗಳಿಗೆ ಸೀಮಿತಗೊಳಿಸಲಾಗುತ್ತದೆ. ಅಂದರೆ ಉಭಯ ತಂಡಗಳು ಕೇವಲ 5 ಓವರ್ಗಳ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇನ್ನು ಐದು ಓವರ್ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದ್ದರೆ ಮಾತ್ರ ಈ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.
ಇದಕ್ಕೂ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ 6 ರನ್ಗಳಿಂದ ರೋಚಕ ಜಯ ಸಾಧಿಸಿತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅಭ್ಯಾಸವನ್ನು ಎದುರು ನೋಡಿದ್ದ ಟೀಮ್ ಇಂಡಿಯಾಗೆ ನಿರಾಸೆ ಎದುರುರಾಗಿದೆ. ಏಕೆಂದರೆ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಅಭ್ಯಾಸ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಹೀಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ನೊಂದಿಗೆ ಕಣಕ್ಕಿಳಿಯುವ ಟೀಮ್ ಇಂಡಿಯಾದ ಯೋಜನೆಗಳು ತಲೆಕೆಳಗಾಗಿದೆ.
ಇದಾಗ್ಯೂ 5 ಓವರ್ಗಳ ಪಂದ್ಯದಲ್ಲಿ ಗೆಲ್ಲುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಏಕೆಂದರೆ ನ್ಯೂಜಿಲೆಂಡ್ ಟಿ20 ವಿಶ್ವಕಪ್ನಲ್ಲಿ ಗ್ರೂಪ್-1 ನಲ್ಲಿರುವ ತಂಡ. ಅಂದರೆ ಟೀಮ್ ಇಂಡಿಯಾ ಗ್ರೂಪ್-2 ನಲ್ಲಿದ್ದು, ಈ ತಂಡವನ್ನು ಸೂಪರ್-12 ಸುತ್ತಿನಲ್ಲಿ ಎದುರಿಸುವುದಿಲ್ಲ. ಆದರೆ ಈ ಕಿವೀಸ್ ತಂಡ ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾಗೆ ಎದುರಾಗಬಹುದು. ಹೀಗಾಗಿ ಅಭ್ಯಾಸ ಪಂದ್ಯಗಳಲ್ಲೇ ಮೇಲುಗೈ ಸಾಧಿಸಲು ಟೀಮ್ ಇಂಡಿಯಾ ಪಣತೊಟ್ಟಿದೆ.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ನ್ಯೂಜಿಲೆಂಡ್ ತಂಡ ಹೀಗಿದೆ:
ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡೇರಿಲ್ ಮಿಚೆಲ್, ಆಡಮ್ ಮಿಲ್ನ್, ಮಾರ್ಟಿನ್ ಗಪ್ಟಿಲ್, ಲಾಕಿ ಫರ್ಗುಸನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್ವೆಲ್, ಟ್ರೆಂಟ್ ಬೌಲ್ಟ್, ಟ್ರೆಂಟ್ ಬೌಲ್ಟ್, ಫಿನ್ ಅಲೆನ್.