ಪುಣೆಯ ಟರ್ನಿಂಗ್ ಟ್ರ್ಯಾಕ್‌ನಲ್ಲಿ ಭಾರತದ ತಂತ್ರವನ್ನು ಬುಡಮೇಲು ಮಾಡಿದ್ದ ನ್ಯೂಜಿಲೆಂಡ್‌ನ ಸ್ಪಿನ್ನರ್‌ಗಳು ರೋಹಿತ್ ಪಡೆಯನ್ನು ಸೈಲೆಂಟ್ ಮಾಡಿದ್ದರು. ಎರಡೂ ಇನ್ನಿಂಗ್ಸ್ಗಳಲ್ಲಿ ಟೀಂ ಇಂಡಿಯಾ ಕಳೆದುಕೊಂಡ 20 ವಿಕೆಟ್ಗಳಲ್ಲಿ 18 ವಿಕೆಟ್‌ಗಳನ್ನು ಸ್ಪಿನ್ನರ್ಗಳೇ ಉರುಳಿಸಿದ್ದರು. ಈ ಪಂದ್ಯದ ಸೋಲಿನ ಜತೆಗೆ ಸರಣಿಯನ್ನೂ ಕಳೆದುಕೊಂಡಿರುವ ಭಾರತ ತಂಡ ಇದೀಗ ವೈಟ್ ವಾಶ್ ಭೀತಿ ಎದುರಿಸುತ್ತಿದೆ. ಏತನ್ಮಧ್ಯೆ, ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ, ತಂಡದ ಈ ದೌರ್ಬಲ್ಯವನ್ನು ಹೋಗಲಾಡಿಸಲು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಅದರಂತೆ, ಮುಂಬೈ ಟೆಸ್ಟ್‌ಗೂ ಮೊದಲು ಟೀಂ ಇಂಡಿಯಾ ಆಟಗಾರರ ಅಭ್ಯಾಸಕ್ಕೆ ನೆರವಾಗಲು 35 ಬೌಲರ್‌ಗಳನ್ನು ನೆಟ್ಸ್‌ಗೆ ಇಳಿಸಲಾಗಿದೆ ಎಂದು ವರದಿಯಾಗಿದೆ.
ಪುಣೆ ಟೆಸ್ಟ್‌ನಲ್ಲಿ ಹೀನಾಯ ಸೋಲಿನ ನಂತರ ಕಠಿಣ ನಿರ್ಧಾರ ಕೈಗೊಂಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ಆಟಗಾರರ ದೀಪಾವಳಿ ರಜೆಯನ್ನು ರದ್ದುಗೊಳಿಸಿದ್ದಾರೆ. ಆ ಪ್ರಕಾರ ತಂಡದ ಆಡಳಿತ ಮಂಡಳಿಯು ಎಲ್ಲಾ ಆಟಗಾರರಿಗೆ ಎರಡು ದಿನಗಳ ಅಭ್ಯಾಸವನ್ನು ಕಡ್ಡಾಯಗೊಳಿಸಿತ್ತು. ಹೀಗಾಗಿ ದೀಪಾವಳಿಯ ದಿನವೂ ಭಾರತದ ಬ್ಯಾಟ್ಸ್‌ಮನ್‌ಗಳು ನೆಟ್ಸ್‌ನಲ್ಲಿ ಬೆವರು ಸುರಿಸಲಿದ್ದಾರೆ. ಈ ನಡುವೆ ಆಟಗಾರರ ಸ್ಪಿನ್ ದೌರ್ಬಲ್ಯವನ್ನು ಕಡಿಮೆ ಮಾಡಲು ಟೀಂ ಮ್ಯಾನೇಜ್‌ಮೆಂಟ್ 35 ಬೌಲರ್‌ಗಳನ್ನು ಅಭ್ಯಾಸಕ್ಕೆ ಕರೆಸಲು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯಿಂದ ಅನುಮತಿ ಕೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವರದಿ ಪ್ರಕಾರ, ಈ 35 ಬೌಲರ್ಗಳಲ್ಲಿ ಸ್ಪಿನ್ನರ್ಗಳೇ ಅಧಿಕವಾಗಿದ್ದಾರೆ. ಈ ಮೂಲಕ ಸ್ಪಿನ್ನರ್‌ಗಳನ್ನು ಎದುರಿಸುವುದರೊಂದಿಗೆ ಟೀಂ ಇಂಡಿಯಾ ಆಟಗಾರರು ಕಿವೀಸ್ ಸ್ಪಿನ್ನರ್‌ಗಳ ಮುಂದೆ ಮುಕ್ತವಾಗಿ ಆಡುವಂತೆ ಮಾಡುವುದು ರೋಹಿತ್ ಮತ್ತು ಗಂಭೀರ್ ಅವರ ಯೋಜನೆಯಾಗಿದೆ. ಆದರೆ ಇನ್ನೆರಡು ದಿನಗಳಲ್ಲಿ ಈ ದೌರ್ಬಲ್ಯ ಎಷ್ಟರ ಮಟ್ಟಿಗೆ ನಿವಾರಣೆಯಾಗಲಿದೆ ಎಂಬುದು ಟೆಸ್ಟ್ ಪಂದ್ಯ ಆರಂಭವಾದ ಬಳಿಕವೇ ತಿಳಿಯಲಿದೆ.
ಉಭಯ ತಂಡಗಳ ನಡುವೆ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲರ್‌ಗಳು ಟೀಂ ಇಂಡಿಯಾವನ್ನು ಕಾಡಿ ಕೇವಲ 46 ರನ್‌ಗಳಿಗೆ ಆಲೌಟ್ ಮಾಡಿದ್ದರು. ಇದರ ನಂತರ, ರೋಹಿತ್ ಮತ್ತು ಗಂಭೀರ್ ಅವರು ‘ರ್ಯಾಂಕ್ ಟರ್ನರ್’ ಅಂದರೆ ಮೊದಲ ಗಂಟೆಯಿಂದಲೇ ಸ್ಪಿನ್‌ಗೆ ಸಹಾಯ ಮಾಡುವ ಪಿಚ್‌ನ ಸವಾಲನ್ನು ಮುಂದಿಟ್ಟರು. ಇದರಲ್ಲಿ ಭಾರತ ತಂಡವೇ ತನ್ನದೇ ಬಲೆಯಲ್ಲಿ ಸಿಲುಕಿ ಪಂದ್ಯ ಸೋಲಬೇಕಾಯಿತು. ವರದಿಯ ಪ್ರಕಾರ, ಪಂದ್ಯದಲ್ಲಿ ಸೋತರೂ, ಭಾರತ ತಂಡ ಮತ್ತೊಮ್ಮೆ ಅಂತಹುದೇ ವಿಕೆಟ್‌ಗೆ ಬೇಡಿಕೆ ಇಟ್ಟಿದೆ. ಬಹುಶಃ ಈ ಕಾರಣಕ್ಕಾಗಿಯೇ ಕೋಚ್ ಗಂಭೀರ್ ಈ ಬಾರಿ ಸ್ಪಿನ್ ಆಡಲು ಬ್ಯಾಟ್ಸ್‌ಮನ್‌ಗಳನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.
ಮುಂಬೈನ ವಾಂಖೆಡೆ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುತ್ತದೆ. ಇದಕ್ಕೆ ಪೂರಕವಾಗಿ ಭಾರತದ ಪರ ರವಿಚಂದ್ರನ್ ಅಶ್ವಿನ್ ಈ ಮೈದಾನದಲ್ಲಿ ಆಡಿರುವ 5 ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ. ಆದರೆ ಜಡೇಜಾ ಇಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದು ಅವರೂ ಕೂಡ 6 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಟೀಂ ಇಂಡಿಯಾಗೆ ಎಚ್ಚರಿಕೆಯ ಅಂಶವೆಂದರೆ ಇಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಕೊನೆಯ ಬಾರಿ ಮುಖಾಮುಖಿಯಾದಾಗ, ಅಜಾಜ್ ಪಟೇಲ್ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು. ಅವರು ಪ್ರಸ್ತುತ ತಂಡದ ಭಾಗವಾಗಿರುವುದು ರೋಹಿತ್ ಪಡೆಯ ಟೆನ್ಷನ್ ಹೆಚ್ಚಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ