IND vs NZ: 5+1+1=7 ವಿಕೆಟ್; ವಾರೆ ವ್ಹಾ ವಾಷಿಂಗ್ಟನ್ ಸುಂದರ್

|

Updated on: Oct 24, 2024 | 4:46 PM

Washington Sundar: ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಮೂರು ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಸುಂದರ್ 7 ವಿಕೆಟ್‌ಗಳನ್ನು ಪಡೆದು ನ್ಯೂಜಿಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. ಇದು ಒಂದು ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

IND vs NZ: 5+1+1=7 ವಿಕೆಟ್; ವಾರೆ ವ್ಹಾ ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್
Follow us on

ಪುಣೆಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಸ್ಪಿನ್‌ ಮ್ಯಾಜಿಕ್ ಮೂಲಕ ಕಿವೀಸ್ ತಂಡವನ್ನು ಬೃಹತ್ ಮೊತ್ತ ಕಲೆಹಾಕದಂತೆ ತಡೆದಿದ್ದಾರೆ. ಬರೋಬ್ಬರಿ 3 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ಗೆ ಪುನರಾಗಮನ ಮಾಡಿದ ಸುಂದರ್ ಕಿವೀಸ್ ತಂಡದ ಏಳು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರಲ್ಲಿ ಸುಂದರ್, ಐವರು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿದರೆ, ಒಂದು ಎಲ್ಬಿಡಬ್ಲ್ಯೂ ಮತ್ತು ಒಂದು ಕ್ಯಾಚ್ ಔಟ್ ಮಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ 23.1 ಓವರ್‌ ಬೌಲ್ ಮಾಡಿದ ಸುಂದರ್ 59 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಸುಂದರ್ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಸ್ಪೆಲ್ ಮಾಡಿದ ಭಾರತದ ಜಂಟಿ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

7 ವಿಕೆಟ್ ಉರುಳಿಸಿದ ಸುಂದರ್

ಈ ಪಂದ್ಯದಲ್ಲಿ ರಚಿನ್ ರವೀಂದ್ರ ರೂಪದಲ್ಲಿ ಮೊದಲ ವಿಕೆಟ್ ಪಡೆಯುವ ಮೂಲಕ ವಿಕೆಟ್​ಗಳ ಭೇಟೆ ಆರಂಭಿಸಿದ ಸುಂದರ್, ಇದರ ನಂತರ ಟಾಮ್ ಬ್ಲಂಡೆಲ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಅಜಾಜ್ ಪಟೇಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ವಾಷಿಂಗ್ಟನ್ ಸುಂದರ್ ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವುದು ಇದೇ ಮೊದಲು. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪರ 4 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದ ವಾಷಿಂಗ್ಟನ್ ಸುಂದರ್ ಈ ಬಾರಿ ಒಂದೇ ಇನ್ನಿಂಗ್ಸ್​ನಲ್ಲಿ 7 ವಿಕೆಟ್ ಪಡೆದಿದ್ದಾರೆ.

ಟೀಕಾಕಾರರ ಬಾಯಿಗೆ ಭೀಗ

ನಾಯಕ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಕಾರಣ ತಂಡದಲ್ಲಿ ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗಿರುವಾಗ ಸುನಿಲ್ ಗವಾಸ್ಕರ್ ಕೂಡ ಈ ನಿರ್ಧಾರವನ್ನು ತಪ್ಪು ಎಂದಿದ್ದರು. ಈ ಪಂದ್ಯದಲ್ಲಿ ಕುಲ್ದೀಪ್‌ಗೆ ಅವಕಾಶ ಸಿಗಬೇಕಿತ್ತು ಎಂದು ಗವಾಸ್ಕರ್ ವೀಕ್ಷಕ ವಿವರಣೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ವಾಷಿಂಗ್ಟನ್ ಸುಂದರ್ ತಮ್ಮ ಪ್ರದರ್ಶನದ ಮೂಲಕ ಟೀಕಾಕಾರರ ಬಾಯಿ ಮುಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Thu, 24 October 24