ಭಾರತ ಪುರುಷರ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರಬಹುದು. ಆದರೆ ಭಾರತ ಮಹಿಳಾ ತಂಡ ಇದಕ್ಕೆ ಅವಕಾಶ ನೀಡಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಇದರೊಂದಿಗೆ ಭಾರತ ತಂಡ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ತಂಡದ ಉಪನಾಯಕಿ ಮತ್ತು ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಶತಕದ ಜೊತೆಯಾಟ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. ಇದರಲ್ಲಿ ಸ್ಮೃತಿ ಮಂಧಾನ ತಮ್ಮ ಏಕದಿನ ವೃತ್ತಿಜೀವನದ ದಾಖಲೆಯ 8 ನೇ ಶತಕ ಸಿಡಿಸಿದರೆ, ಅದೇ ಸಮಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಅತ್ಯುತ್ತಮ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಸರಣಿಯ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟ್ ಮಾಡಿ 49.5 ಓವರ್‌ಗಳಲ್ಲಿ ಕೇವಲ 232 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ಗೆ ಆರಂಭಿಕ ಆಘಾತ ಎದುರಾಗಿದ್ದೆ ಈ ಅಲ್ಪ ರನ್ ಕಲೆಹಾಕಲು ಕಾರಣವಾಯಿತು. ಒಂದು ಹಂತದಲ್ಲಿ ಕಿವೀಸ್ ತಂಡ 88 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದು, ಆರಂಭಿಕ ಹಿನ್ನಡೆಯನ್ನುಂಟು ಮಾಡಿತು. ಪ್ರಮುಖ ಬ್ಯಾಟರ್ಗಳಾ್ ಸುಜಿ ಬೇಟ್ಸ್ ಮತ್ತು ನಾಯಕಿ ಸೋಫಿ ಡಿವೈನ್ ಬೇಗನೆ ಔಟಾದರೆ, ಜಾರ್ಜಿಯಾ ಪ್ಲಿಮ್ಮರ್ (39) ಅವರ ಇನ್ನಿಂಗ್ಸ್ ಕೂಡ ತುಂಬಾ ದೊಡ್ಡದಾಗಿರಲಿಲ್ಲ.
3rd ODI ✅
Series ✅#TeamIndia win the third and final #INDvNZ ODI by 6 wickets and complete a 2-1 series win over New Zealand 👏Scoreboard ▶️ https://t.co/B6n070iLqu@IDFCFIRSTBank pic.twitter.com/grwAuDS6Qe
— BCCI Women (@BCCIWomen) October 29, 2024
ಇಂತಹ ಪರಿಸ್ಥಿತಿಯಲ್ಲಿ ಬ್ರೂಕ್ ಹ್ಯಾಲಿಡೇ ಜವಾಬ್ದಾರಿ ವಹಿಸಿ ಭಾರತದ ಬೌಲರ್ಗಳನ್ನು ದಿಟ್ಟತನದಿಂದ ಎದುರಿಸಿದರು. ಆದಾಗ್ಯೂ ತಮ್ಮ ಶತಕದಿಂದ ವಂಚಿತರಾದ ಹ್ಯಾಲಿಡೆ 86 ರನ್ (96 ಎಸೆತ, 9 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ನಂತರ ಅಲ್ಪ ಕಾಣಿಕೆ ನೀಡುವಲ್ಲಿ ಯಶಸ್ವಿಯಾದ ತಂಡದ ಕೆಳ ಕ್ರಮಾಂಕ ತಂಡವನ್ನು 232 ರನ್‌ಗಳಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಕಳೆದ ಪಂದ್ಯದಲ್ಲಿ ತನ್ನ ಕಳಪೆ ಫೀಲ್ಡಿಂಗ್‌ನಿಂದ ನ್ಯೂಜಿಲೆಂಡ್‌ನ ಗೆಲುವಿನ ಹಾದಿಯನ್ನು ಸುಲಭಗೊಳಿಸಿದ್ದ ಭಾರತ ತಂಡವು ಈ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡಿದಲ್ಲದೆ ಪ್ರತಿಯೊಂದು ಕ್ಯಾಚ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು. ಜೊತೆಗೆ 2 ರನ್ ಔಟ್ ಮಾಡಿದ್ದು ಸಹ ವಿಶೇಷವಾಗಿತ್ತು. ತಂಡದ ಪರ ದೀಪ್ತಿ ಶರ್ಮಾ 3 ವಿಕೆಟ್ ಹಾಗೂ ಯುವ ಸ್ಪಿನ್ನರ್ ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಮತ್ತೊಮ್ಮೆ ಕೆಟ್ಟ ಆರಂಭವನ್ನು ಪಡೆದಿಕೊಂಡತು. ಶೆಫಾಲಿ ವರ್ಮಾ ನಾಲ್ಕನೇ ಓವರ್‌ನಲ್ಲಿಯೇ ಔಟಾದರು. ಟಿ20 ವಿಶ್ವಕಪ್ ಹಾಗೂ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಸ್ಮೃತಿ ಈ ಬಾರಿ ಎಚ್ಚರಿಕೆಯ ಆಟವಾಡಿ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿದರು ಅವರಿಗೆ ಯಾಸ್ತಿಕಾ ಭಾಟಿಯಾ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಈ ಇಬ್ಬರೂ ಎರಡನೇ ವಿಕೆಟ್‌ಗೆ 76 ರನ್‌ಗಳ ಬಲವಾದ ಜೊತೆಯಾಟವನ್ನು ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದರು. ಈ ಜೊತೆಯಾಟದಲ್ಲಿ ಸ್ಮೃತಿ ಅರ್ಧಶತಕವನ್ನೂ ಪೂರೈಸಿದರು.
ಇದಾದ ಬಳಿಕ ಕ್ರೀಸ್‌ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಮಂಧಾನ ಜತೆಗೂಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಇವರಿಬ್ಬರ ನಡುವೆ ಮೂರನೇ ವಿಕೆಟ್‌ಗೆ 117 ರನ್‌ಗಳ ಜೊತೆಯಾಟವಿತ್ತು. ಈ ಸಮಯದಲ್ಲಿ, ಹರ್ಮನ್‌ಪ್ರೀತ್ ಬೇಗನೆ ಅರ್ಧಶತಕ ಗಳಿಸಿದರೆ, ಸ್ವಲ್ಪ ಸಮಯದ ನಂತರ, ಸ್ಮೃತಿ ಕೂಡ ದಾಖಲೆಯ ಶತಕವನ್ನು ಪೂರ್ಣಗೊಳಿಸಿದರು. ಇದು ಸ್ಮೃತಿ ಅವರ ಏಕದಿನ ವೃತ್ತಿಜೀವನದ 8 ನೇ ಶತಕವಾಗಿದ್ದು, ಇದರೊಂದಿಗೆ ಅವರು ಭಾರತದ ಪರ ಹೆಚ್ಚು ಶತಕಗಳನ್ನು ಬಾರಿಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದರು. ಸ್ಮೃತಿ ಶತಕ ಗಳಿಸಿ ಔಟಾದರೂ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅಂತಿಮವಾಗಿ ಭಾರತ 44.2 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Tue, 29 October 24