ಪಾಕ್ ತಂಡದಲ್ಲಿ ಮತ್ತೆ ಬಿರುಕು; ನಾಯಕ- ಮಾಜಿ ನಾಯಕನ ನಡುವೆ ಮುನಿಸು?
Pakistan Cricket Team Rift: ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಒಡಕು ಮುಂದುವರಿದಿದೆ. ಬಾಬರ್ ಆಝಂ ನೇತೃತ್ವದ ಒಂದು ಗುಂಪು ಈಗಾಗಲೇ ಆಸ್ಟ್ರೇಲಿಯಾ ತಲುಪಿದರೆ, ಮೊಹಮ್ಮದ್ ರಿಜ್ವಾನ್ ನೇತೃತ್ವದ ಇನ್ನೊಂದು ಗುಂಪು ಬಳಿಕ ತೆರಳುತ್ತಿದೆ. ಇದು ತಂಡದ ಆಂತರಿಕ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಹೊಸ ನಾಯಕ ಮತ್ತು ಕೋಚ್‌ನ ನೇಮಕಾತಿಯ ಹೊರತಾಗಿಯೂ, ತಂಡದಲ್ಲಿ ಒಗ್ಗಟ್ಟು ಕಾಣೆಯಾಗಿದೆ. ಆಸ್ಟ್ರೇಲಿಯಾದಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ತವರಿನಲ್ಲಿ ಸರಣಿ ಗೆಲುವಿನ ಬರ ನೀಗಿಸಿಕೊಂಡಿದ್ದ ಪಾಕಿಸ್ತಾನ, ಆ ಬಳಿಕವೂ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಆ ಪ್ರಕಾರ, ಮುಖ್ಯ ಕೋಚ್ ಬದಲಾಗಿದ್ದು, ಸೀಮಿತ ಓವರ್ಗಳ ನಾಯಕನೂ ಬದಲಾಗಿದ್ದಾರೆ. ಇದೆಲ್ಲ ನಡೆದ ಬಳಿಕ ಪಾಕ್ ತಂಡದಲ್ಲಿ ಎಲ್ಲವೂ ಸರಿ ಹೋಗಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ತಂಡದಲ್ಲಿ ಏನೆಲ್ಲ ಬದಲಾವಣೆಯಾದರೂ, ಆಟಗಾರರ ನಡುವಿನ ವೈಮನಸು ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸೀಮಿತ ಓವರ್ಗಳ ನಾಯಕನಾಗಿ ಮೊಹಮ್ಮದ್ ರಿಜ್ವಾನ್ ಅಧಿಕಾರ ವಹಿಸಿಕೊಂಡ ಬಳಿಕ ತಂಡದೊಳಗಿರುವ ಒಡುಕಿಗೆ ಪರಿಹಾರ ಸಿಕ್ಕಿದೆ ಎಂದು ಪಾಕ್ ಮಂಡಳಿ ಕೂಡ ಬಾವಿಸಿತ್ತು. ಆದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟಿರುವ ಪಾಕ್ ಆಟಗಾರರು ತಂಡದಲ್ಲಿ ಇನ್ನೂ ಯಾವುದು ಸರಿ ಹೋಗಿಲ್ಲ ಎಂಬುದನ್ನು ಮತ್ತೆ ಜಗಜ್ಜಾಹೀರು ಮಾಡಿದ್ದಾರೆ.
ಪಾಕ್ ತಂಡದಲ್ಲಿ 2 ಗುಂಪು
ವಾಸ್ತವವಾಗಿ ಯಾವುದೇ ತಂಡ ವಿದೇಶಿ ಪ್ರವಾಸ ಕೈಗೊಂಡರೆ, ತಂಡದ ಆಟಗಾರರೆಲ್ಲರೂ ಒಟ್ಟಿಗೆ ಪ್ರಯಾಣ ಬೆಳೆಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೆಲವು ಆಟಗಾರರು ಆ ಬಳಿಕ ತಂಡವನ್ನು ಕೂಡಿಕೊಳ್ಳುತ್ತಾರೆ. ಆದರೆ, ಪಾಕಿಸ್ತಾನ ತಂಡದಲ್ಲಿ ಇದು ಕಾಣಲಿಲ್ಲ. ಆಸ್ಟ್ರೇಲಿಯಾ ಪ್ರವಾಸ ಬೆಳೆಸಿರುವ ಪಾಕ್ ತಂಡದ ಆಟಗಾರರೆಲ್ಲರೂ ಒಟ್ಟಿಗೆ ವಿಮಾನ ಏರಿಲ್ಲ. ಬದಲಾಗಿ ಪಾಕ್ ತಂಡದಲ್ಲಿ ಮತ್ತೆ ಎರಡು ಗುಂಪುಗಳಾಗಿದ್ದು, ಮಾಜಿ ನಾಯಕ ಬಾಬರ್ ಆಝಂ ನೇತೃತ್ವದ ಮೊದಲ ಗುಂಪು ಮೆಲ್ಬೋರ್ನ್ ತಲುಪಿದರೆ, ಹೊಸ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಇತರ ಆಟಗಾರರ ಎರಡನೇ ಗುಂಪು ಇಂದು ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಲಿದೆ.
ಬಾಬರ್ ಆಝಂ ನೇತೃತ್ವದ ಮೊದಲ ಗುಂಪು ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದರೆ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಹಲವು ಆಟಗಾರರು ಅಕ್ಟೋಬರ್ 29 ರಂದು ಮೆಲ್ಬೋರ್ನ್‌ಗೆ ತೆರಳುವ ಸುದ್ದಿ ಇದೆ. ಪಾಕಿಸ್ತಾನ ಕ್ರಿಕೆಟ್ ಹಂಚಿಕೊಂಡ ಚಿತ್ರಗಳು ಮತ್ತು ವೀಡಿಯೊಗಳು ಬಾಬರ್ ಆಝಂ ಜೊತೆಗೆ ಮೆಲ್ಬೋರ್ನ್ ತಲುಪಿದ ಆಟಗಾರರಲ್ಲಿ ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಇರ್ಫಾನ್ ಖಾನ್ ನಿಯಾಜಿ ಮತ್ತು ಫೈಝಲ್ ಅಕ್ರಮ್ ಸೇರಿದ್ದಾರೆ ಎಂದು ತೋರಿಸುತ್ತದೆ. ಇವರನ್ನು ಹೊರತುಪಡಿಸಿ ಉಳಿದ ಆಟಗಾರರು ಅಕ್ಟೋಬರ್ 29 ರಂದು ರಿಜ್ವಾನ್ ಜೊತೆಗೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.
📸 Members of the Pakistan ODI squad for the Australia series arrive in Melbourne 🛬
The remaining ODI players will depart for Melbourne today 🏏#AUSvPAK pic.twitter.com/K5Q3cXYn3d
— Pakistan Cricket (@TheRealPCB) October 29, 2024
ಸರಣಿ ವಿವರ ಹೀಗಿದೆ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ. ನವೆಂಬರ್ 4 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಕೊನೆಯ ಏಕದಿನ ಪಂದ್ಯ ನವೆಂಬರ್ 10 ರಂದು ನಡೆಯಲಿದೆ. ನವೆಂಬರ್ 14ರಿಂದ 18ರವರೆಗೆ ಟಿ20 ಸರಣಿ ನಡೆಯಲಿದೆ.
ಹೊಸ ನಾಯಕ, ಕೋಚ್ ಮತ್ತು ಆಸ್ಟ್ರೇಲಿಯಾ ಪ್ರವಾಸ
ಈ ಪ್ರವಾಸಕ್ಕೂ ಮುನ್ನ ಪಾಕ್ ಕ್ರಿಕೆಟ್‌ನಲ್ಲಿ ಅಲ್ಲೋಲಕಲ್ಲೋಲ ನಡೆದಿತ್ತು. ಹೊಸ ನಾಯಕನ ಘೋಷಣೆಯ ಒಂದು ದಿನದ ನಂತರ ವೈಟ್ ಬಾಲ್ ಕೋಚ್ ಗ್ಯಾರಿ ಕರ್ಸ್ಟನ್ ರಾಜೀನಾಮೆ ನೀಡಿದರು. ಹೀಗಾಗಿ ಪಿಸಿಬಿ ಜೇಸನ್ ಗಿಲ್ಲೆಸ್ಪಿ ಅವರನ್ನು ವೈಟ್ ಬಾಲ್ ತಂಡದ ಹೊಸ ಕೋಚ್ ಆಗಿ ನೇಮಿಸಿದೆ. ಆಯ್ಕೆಗಾರ ಅಸದ್ ಶಫೀಕ್ ಕೂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದೊಂದಿಗೆ ಇರಲಿದ್ದು, ಪ್ಲೇಯಿಂಗ್ ಇಲೆವೆನ್ ನಿರ್ಧರಿಸುವಲ್ಲಿ ನಾಯಕ ಮತ್ತು ಕೋಚ್‌ಗೆ ಬೆಂಬಲ ನೀಡಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Tue, 29 October 24