
ವಿಶಾಖಪಟ್ಟಣದ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ 4ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡ ಕೊನೆಗೂ ಈ ಟಿ20 ಸರಣಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿವೀಸ್, ಕೊನೆಗೂ ಗೆಲುವು ಕಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 215 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 165 ರನ್‌ಗಳಿಗೆ ಆಲೌಟ್ ಆಗುವ ಮೂಲಕ 50 ರನ್ಗಳಿಂದ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಶಿವಂ ದುಬೆ (Shivam Dube) 23 ಎಸೆತಗಳಲ್ಲಿ 65 ರನ್ ಬಾರಿಸುವ ಮೂಲಕ ಎದುರಾಳಿ ತಂಡದಲ್ಲಿ ಸೋಲಿನ ಭಯ ಹುಟ್ಟಿಸಿದ್ದರು. ಆದರೆ ದುರಾದೃಷ್ಟಕರ ರೀತಿಯಲ್ಲಿ ರನೌಟ್ಗೆ ಬಲಿಯಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 215 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಟಿಮ್ ಸೀಫರ್ಟ್ 36 ಎಸೆತಗಳಲ್ಲಿ 62 ರನ್ ಗಳಿಸಿದರೆ, ಡೆವೊನ್ ಕಾನ್ವೇ 23 ಎಸೆತಗಳಲ್ಲಿ 44 ರನ್ ಗಳಿಸಿ ಉಪಯುಕ್ತ ಇನ್ನಿಂಗ್ಸ್ ಆಡಿದರು. ಈ ಇಬ್ಬರೂ ಮೊದಲ ವಿಕೆಟ್‌ಗೆ ತ್ವರಿತ ಆರಂಭವನ್ನು ನೀಡಿದರು. ನಂತರ, ಡ್ಯಾರಿಲ್ ಮಿಚೆಲ್ 18 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ಸ್ಕೋರ್ ಅನ್ನು 200 ರನ್‌ಗಳ ಗಡಿ ದಾಟಿಸಿದರು. ಭಾರತದ ಪರ, ಅರ್ಷದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರಾದರೂ, ಒಟ್ಟಾರೆಯಾಗಿ ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳ ವೇಗಕ್ಕೆ ಕಡಿವಾಣ ಹಾಕಲು ವಿಫಲರಾದರು.
ಈ ಗುರಿ ಬೆನ್ನಟ್ಟಿದ ಭಾರತ ಕಳಪೆ ಆರಂಭವನ್ನು ಕಂಡಿತು. ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ಔಟಾದರೆ, ನಾಯಕ ಸೂರ್ಯಕುಮಾರ್ ಯಾದವ್ ಕೂಡ ಬೇಗನೆ ನಿರ್ಗಮಿಸಿದರು. ಅಗ್ರ ಕ್ರಮಾಂಕ ಕುಸಿದ ನಂತರ, ಶಿವಂ ದುಬೆ ಮತ್ತೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಫಾರ್ಮ್ ಅನ್ನು ಪ್ರದರ್ಶಿಸಿ 23 ಎಸೆತಗಳಲ್ಲಿ 65 ರನ್ ಗಳಿಸಿದರು. ಆದರೆ ದುಬೆಗೆ ಇತರ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಸಿಗಲಿಲ್ಲ. ರಿಂಕು ಸಿಂಗ್ 30 ಎಸೆತಗಳಲ್ಲಿ 39 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ ಕೇವಲ 24 ರನ್ ಗಳಿಸಿದರು. ಕೊನೆಯಲ್ಲಿ, ಭಾರತ ತಂಡ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು.
6,6,6,6,6,6,6.. 23 ಎಸೆತಗಳಲ್ಲಿ 65 ರನ್ ಚಚ್ಚಿದ ಶಿವಂ ದುಬೆ
ನ್ಯೂಜಿಲೆಂಡ್ ಪರ ನಾಯಕ ಮಿಚೆಲ್ ಸ್ಯಾಂಟ್ನರ್ ಮೂರು ವಿಕೆಟ್ ಪಡೆದರೆ, ಇಶ್ ಸೋಧಿ ಮತ್ತು ಜಾಕೋಬ್ ಡಫಿ ಕೂಡ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವು ಸರಣಿಯಲ್ಲಿ ನ್ಯೂಜಿಲೆಂಡ್‌ನ ಗೌರವವನ್ನು ಉಳಿಸಿದ್ದಲ್ಲದೆ, ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು. ಇತ್ತ ಈ ಸೋಲು ಭಾರತಕ್ಕೆ ಒಂದು ಪಾಠವಾಗಿದೆ, ವಿಶೇಷವಾಗಿ 2026 ರ ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ ಟೀಂ ಇಂಡಿಯಾ ತನ್ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:36 pm, Wed, 28 January 26