6,6,6,6,6,6,6.. 23 ಎಸೆತಗಳಲ್ಲಿ 65 ರನ್ ಚಚ್ಚಿದ ಶಿವಂ ದುಬೆ
Shivam Dube's Explosive 15-Ball Fifty vs NZ T20: ವಿಶಾಖಪಟ್ಟಣದಲ್ಲಿ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ, ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಪರ ಶಿವಂ ದುಬೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದುಬೆ, 23 ಎಸೆತಗಳಲ್ಲಿ 65 ರನ್ (7 ಸಿಕ್ಸರ್, 3 ಬೌಂಡರಿ) ಬಾರಿಸಿ ತಂಡಕ್ಕೆ ಆಧಾರವಾದರು. ಸೋಧಿ ಓವರ್‌ನಲ್ಲಿ 29 ರನ್ ಕಲೆಹಾಕಿ ದಾಖಲೆ ಬರೆದರು. ಅವರ ಹೋರಾಟದ ಇನ್ನಿಂಗ್ಸ್ ಗಮನ ಸೆಳೆಯಿತು.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿರುವ 215 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆಲ್‌ರೌಂಡರ್ ಶಿವಂ ದುಬೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ತಂಡವು 82 ರನ್ಗಳಿಗೆ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ಶಿವಂ ದುಬೆ ಕಿವೀಸ್ ಬೌಲರ್ಗಳ ಎದುರು ಸಿಕ್ಸರ್ ಹಾಗೂ ಬೌಂಡರಿಗಳ ಮಳೆಗರೆದರು.
ಹಾರ್ದಿಕ್ ಪಾಂಡ್ಯ ಔಟಾದ ಬಳಿಕ ಕ್ರೀಸ್ಗೆ ಬಂದ ದುಬೆ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟುವ ಮೂಲಕ ಸ್ಫೋಟಕ ಆರಂಭ ಪಡೆದರು. ಆ ಬಳಿಕವೂ ತನ್ನ ಹೊಡಿಬಡಿ ಆಟ ಮುಂದುವರೆಸಿದ ದುಬೆ, ಸೋಧಿ ಬೌಲ್ ಮಾಡಿದ ಒಂದೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಕಲೆಹಾಕಿದರು. ಈ ಓವರ್‌ನಲ್ಲಿ ದುಬೆ 3 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಬಾರಿಸಿದರು. ಮುಂದಿನ ಓವರ್‌ನಲ್ಲಿ 2 ಸಿಕ್ಸರ್‌ಗಳನ್ನು ಬಾರಿಸಿದ ದುಬೆ ಕೇವಲ 15 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಇದರೊಂದಿಗೆ ದುಬೆ ನ್ಯೂಜಿಲೆಂಡ್ ವಿರುದ್ಧ ವೇಗದ ಅರ್ಧಶತಕ ಬಾರಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಭಿಷೇಕ್ ಶರ್ಮಾ ಇದೇ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು. ಇನ್ನು ಈ ಪಂದ್ಯದಲ್ಲಿ ಏಕಾಂಗಿಯಾಗಿ ನಿಂತು ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ದುಬೆ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್ಗೆ ಬಲಿಯಾದರು. ಅಂತಿಮವಾಗಿ ದುಬೆ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಹಿತ 65 ರನ್ ಬಾರಿಸಿದರು.

