ಟೀಂ ಇಂಡಿಯಾ ಗೆಲುವನ್ನು ತ್ರಿವರ್ಣ ಹಿಡಿದು, ಪಟಾಕಿ ಸಿಡಿಸಿ ಸಂಭ್ರಮಿಸಿದ ಜಮ್ಮು- ಕಾಶ್ಮೀರದ ಜನತೆ; ವಿಡಿಯೋ ನೋಡಿ

|

Updated on: Oct 15, 2023 | 6:47 AM

India vs Pakistan ICC World Cup 2023: ರೋಹಿತ್ ಪಡೆಯ ಈ ಅಮೋಘ ಗೆಲುವಿನಿಂದ ಹರ್ಷಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಅಭಿಮಾನಿಗಳು ರಸ್ತೆಗೆ ಇಳಿದು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಟೀಂ ಇಂಡಿಯಾ ಗೆಲುವನ್ನು ತ್ರಿವರ್ಣ ಹಿಡಿದು, ಪಟಾಕಿ ಸಿಡಿಸಿ ಸಂಭ್ರಮಿಸಿದ ಜಮ್ಮು- ಕಾಶ್ಮೀರದ ಜನತೆ; ವಿಡಿಯೋ ನೋಡಿ
ಪಟಾಕಿ ಸಿಡಿಸಿ ಸಂಭ್ರಮಿಸಿದ ಜಮ್ಮು ಮತ್ತು ಕಾಶ್ಮೀರದ ಫ್ಯಾನ್ಸ್
Follow us on

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಏಕದಿನ ವಿಶ್ವಕಪ್​ನ (ICC World Cup 2023) ಹೈವೋಲ್ಟೇಜ್ ಕದನದಲ್ಲಿ ರೋಹಿತ್ ಪಡೆ, ಪಾಕಿಸ್ತಾನ ತಂಡವನ್ನು 7 ವಿಕೆಟ್​ಗಳಿಂದ ಬಗ್ಗುಬಡಿದಿದೆ. ಭಾರತದ ಈ ಗೆಲುವನ್ನು ಇಡೀ ಭಾರತದಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ. ಅದರಲ್ಲೂ ರೋಹಿತ್ ಪಡೆಯ ಈ ಅಮೋಘ ಗೆಲುವಿನಿಂದ ಹರ್ಷಗೊಂಡಿರುವ ಜಮ್ಮು ಮತ್ತು ಕಾಶ್ಮೀರದ (Jammu & Kashmir) ಅಭಿಮಾನಿಗಳು ರಸ್ತೆಗೆ ಇಳಿದು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿಮಾನಿಗಳು ಬೀದಿಗಳಲ್ಲಿ ತ್ರಿವರ್ಣವನ್ನು ಹಿಡಿದು ‘ಇಂಡಿಯಾ ಇಂಡಿಯಾ’ ಎಂದು ಕೂಗುತ್ತ ಕುಣಿದು ಕುಪ್ಪಳಿಸಿದ್ದಾರೆ.

ಪಾಕಿಸ್ತಾನಕ್ಕೆ ಉತ್ತಮ ಆರಂಭ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಯುವ ಆರಂಭಿಕರಾದ ಅಬ್ದುಲ್ಲಾ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಒಟ್ಟಾಗಿ ಎಂಟು ಓವರ್‌ಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಸಿರಾಜ್ ಎಸೆದಲ್ಲಿ ಶಫೀಕ್ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಇದಾದ ನಂತರ ಪಾಂಡ್ಯ, ಇಮಾಮ್ ಉಲ್ ಹಕ್ (36) ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

ನಂತರ ಜೊತೆಯಾದ ನಾಯಕ ಬಾಬರ್ ಆಝಂ (50) ಮತ್ತು ಮೊಹಮ್ಮದ್ ರಿಜ್ವಾನ್ (49) ಬಲಿಷ್ಠ ಜೊತೆಯಾಟ ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಇದರಲ್ಲಿ ಬಾಬರ್ ಭಾರತದ ವಿರುದ್ಧ ಏಕದಿನ ಮಾದರಿಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಸಿಡಿಸಿದರು. ಆದರೆ 30ನೇ ಓವರ್‌ನಲ್ಲಿ ಸಿರಾಜ್ ಎಸೆತದಲ್ಲಿ ಬಾಬರ್ ಆಝಂ ಕ್ಲೀನ್ ಬೌಲ್ಡ್ ಆದರು. ಎರಡು ಓವರ್‌ಗಳ ನಂತರ ಕುಲ್ದೀಪ್ ಯಾದವ್ (2/35) ಸೌದ್ ಶಕೀಲ್ ಮತ್ತು ಇಫ್ತಿಕರ್ ಅಹ್ಮದ್ ಅವರನ್ನು 5 ಎಸೆತಗಳ ಅಂತರದಲ್ಲಿ ಔಟ್ ಮಾಡಿದರು.

‘ಶಾಲಾ ಮಕ್ಕಳೊಂದಿಗೆ ಆಟವಾಡುತ್ತಿರುವಂತೆ ಅನಿಸುತ್ತಿದೆ’: ಸರಣಿ ಟ್ವೀಟ್ ಮೂಲಕ ಪಾಕ್ ತಂಡದ ಕಾಲೆಳೆದ ಸೆಹ್ವಾಗ್

ಕೊನೆಯ 80 ಎಸೆತಗಳಲ್ಲಿ 8 ವಿಕೆಟ್

ಇದರ ನಂತರ ಬುಮ್ರಾ (2/19), ಅವರು ರಿಜ್ವಾನ್ ಅವರನ್ನು ಆಶ್ಚರ್ಯಕರ ರೀತಿಯಲ್ಲಿ ಬೌಲ್ಡ್ ಮಾಡಿದರೆ, ನಂತರ ಶಾದಾಬ್ ಅವರನ್ನು ಸಹ ತಮ್ಮ ಕೆಡ್ಡಾಕೆ ಕೆಡುವಿದರು. ಹಾರ್ದಿಕ್ ಮತ್ತು ರವೀಂದ್ರ ಜಡೇಜಾ (2/38) ಕೊನೆಯ 3 ವಿಕೆಟ್‌ಗಳನ್ನು ಕಬಳಿಸಿ, ಪಾಕಿಸ್ತಾನವನ್ನು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್ ಮಾಡಿದರು. ಕೊನೆಯ 80 ಎಸೆತಗಳಲ್ಲಿ ಪಾಕಿಸ್ತಾನ ಕೇವಲ 36 ರನ್ ಸೇರಿಸಿ 8 ವಿಕೆಟ್ ಕಳೆದುಕೊಂಡಿತು.

ರೋಹಿತ್ ಬಿರುಗಾಳಿಗೆ ತತ್ತರಿಸಿದ ಪಾಕಿಸ್ತಾನ

ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭ ಇನ್ನಷ್ಟು ಸ್ಫೋಟಕವಾಗಿತ್ತು. ರೋಹಿತ್ ಶರ್ಮಾ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಶಾಹೀನ್ ಅಫ್ರಿದಿ ಮೇಲೆ ಬೌಂಡರಿ ಬಾರಿಸಿದರು. ನಂತರ ಡೆಂಗ್ಯೂನಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯವನ್ನು ಆಡುತ್ತಿದ್ದ ಶುಭ್​ಮನ್ ಗಿಲ್, ಮುಂದಿನ ಓವರ್ನಲ್ಲಿ ಹಸನ್ ಅಲಿ ವಿರುದ್ಧ 3 ಬೌಂಡರಿಗಳನ್ನು ಬಾರಿಸಿದರು. ಮುಂದಿನ ಓವರ್​ನಲ್ಲಿ ಗಿಲ್ (16) ಔಟಾದರೂ ರೋಹಿತ್ ದಾಳಿ ಮುಂದುವರಿದಿತ್ತು. ಈ ನಡುವೆ ವಿರಾಟ್ ಕೊಹ್ಲಿ (16) ಕೂಡ ಕೆಲವು ಅತ್ಯುತ್ತಮ ಹೊಡೆತಗಳನ್ನು ಆಡಿ ಹಸನ್ ಅಲಿಗೆ ಬಲಿಯಾದರು.

ಆದಾಗ್ಯೂ, ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ರೋಹಿತ್, ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕ ಪೂರೈಸಿದರು. ಇಲ್ಲಿ ಶ್ರೇಯಸ್ ಅಯ್ಯರ್ ಕೂಡ ನಾಯಕನಿಗೆ ಉತ್ತಮ ಬೆಂಬಲವನ್ನು ನೀಡಿ ಇಬ್ಬರು 76 ರನ್ಗಳ ಜೊತೆಯಾಟವನ್ನು ಮಾಡಿದರು. ಆದಾಗ್ಯೂ, ರೋಹಿತ್ (86) ಸತತ ಎರಡನೇ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡು ಶಾಹೀನ್ ಎಸೆತದಲ್ಲಿ ಕ್ಯಾಚ್ ನೀಡಿದರು. ನಾಯಕನ ಆಟಕ್ಕೆ ಮನಸೋತ ಅಹಮದಾಬಾದ್ ಪ್ರೇಕ್ಷಕರು ಎದ್ದು ನಿಂತು ರೋಹಿತ್ ಅವರ ಅದ್ಭುತ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು. ಉಳಿದ ಕೆಲಸವನ್ನು ಶ್ರೇಯಸ್ (ಔಟಾಗದೆ 53) ಮತ್ತು ರಾಹುಲ್ (ಅಜೇಯ 19) ಮಾಡಿದರು. ಅಯ್ಯರ್ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:25 am, Sun, 15 October 23