India vs Pakistan, Asia Cup 2022: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿನ ಸೋಲಿನ ಸೇಡನ್ನು ಭಾರತ ತಂಡ ತೀರಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ್ದ ಪಾಕ್ ಉತ್ತಮ ಆರಂಭ ಪಡೆದಿರಲಿಲ್ಲ. ಪಂದ್ಯದ ಮೂರನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಪಾಕ್ ನಾಯಕ ಬಾಬರ್ ಆಜಂ (10) ಗೆ ಪೆವಿಲಿಯನ್ ಹಾದಿ ತೋರಿಸಿದ್ದರು.
ಇದಾದ ಬಳಿಕ ಎಚ್ಚರಿಕೆಯ ಆಟವಾಡಿದ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಇನ್ನು ಪವರ್ಪ್ಲೇನ ಅಂತಿಮ ಓವರ್ನಲ್ಲಿ ಫಖರ್ ಝಮಾನ್ (10) ವಿಕೆಟ್ ಪಡೆಯುವ ಮೂಲಕ ಅವೇಶ್ ಖಾನ್ ಟೀಮ್ ಇಂಡಿಯಾಗೆ 2ನೇ ಯಶಸ್ಸು ತಂದುಕೊಟ್ಟರು.
ಈ ಹಂತದಲ್ಲಿ ಜೊತೆಗೂಡಿದ ರಿಜ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಪರಿಣಾಮ 10 ಓವರ್ಗಳಲ್ಲಿ ಪಾಕಿಸ್ತಾನ್ ತಂಡವು 68 ರನ್ ಕಲೆಹಾಕಿತು. ಮೊದಲ ಹತ್ತು ಓವರ್ಗಳಲ್ಲಿ ಮೇಲುಗೈ ಸಾಧಿಸಿ ಟೀಮ್ ಇಂಡಿಯಾ ಬೌಲರ್ಗಳು ಪಾಕ್ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು.
ಅದರಂತೆ 13ನೇ ಓವರ್ನ ಹಾರ್ದಿಕ್ ಪಾಂಡ್ಯರ ಮೊದಲ ಎಸೆತದಲ್ಲೇ ಇಫ್ತಿಕರ್ ಅಹ್ಮದ್ (28) ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದರು. ಇದಾಗ್ಯೂ ಮತ್ತೊಂದೆಡೆ ಮೊಹಮ್ಮದ್ ರಿಜ್ವಾನ್ ಕ್ರೀಸ್ ಕಚ್ಚಿ ನಿಂತಿದ್ದರು. ಇದೇ ವೇಳೆ ಮತ್ತೆ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಎಸೆತವನ್ನು ಥರ್ಡ್ಮ್ಯಾನ್ನತ್ತ ಬಾರಿಸಲು ಹೋಗಿ ರಿಜ್ವಾನ್ (42) ಕೂಡ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಖುಷ್ದಿಲ್ ಶಾ (7) ಜಡೇಜಾಗೆ ಕ್ಯಾಚ್ ನೀಡಿ ಹೊರನಡೆದರು. ಈ ಮೂಲಕ ಹಾರ್ದಿಕ್ ಪಾಂಡ್ಯ 15ನೇ ಓವರ್ನಲ್ಲಿ ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.
ಪರಿಣಾಮ ಪಾಕ್ ತಂಡವು 15ನೇ ಓವರ್ನಲ್ಲಿ 100 ರನ್ಗಳ ಗಟಿದಾಡುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಇನ್ನು ಆಸೀಫ್ ಅಲಿ 9 ರನ್ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಬೌಂಡರಿ ಲೈನ್ನಲ್ಲಿದ್ದ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದರು. ಇನ್ನು 18ನೇ ಓವರ್ನಲ್ಲಿ ನವಾಜ್ (1) ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾಗೆ 7ನೇ ಯಶಸ್ಸು ತಂದುಕೊಟ್ಟರು.
18ನೇ ಓವರ್ ಮುಕ್ತಾಯದ ವೇಳೆಗೆ 124 ರನ್ ಕಲೆಹಾಕಿದ್ದ ಪಾಕಿಸ್ತಾನ್ ತಂಡಕ್ಕೆ 19ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸುವ ಮೂಲಕ ಅಂತಿಮ ಓವರ್ಗಳಲ್ಲಿ ರನ್ ಗತಿಯನ್ನು ನಿಯಂತ್ರಿಸಿದರು. ಅಂತಿಮ ಹಂತದಲ್ಲಿ 6 ಎಸೆತಗಳಲ್ಲಿ 16 ರನ್ ಬಾರಿಸಿದ್ದ ದಹಾನಿಯನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪಾಕಿಸ್ತಾನ್ ತಂಡವನ್ನು 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಮಾಡಿತು.
ಟೀಮ್ ಇಂಡಿಯಾ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರು. ಇನ್ನು ಅರ್ಷದೀಪ್ ಸಿಂಗ್ 2 ವಿಕೆಟ್ ಉರುಳಿಸಿದರೆ, ಅವೇಶ್ ಖಾನ್ 1 ವಿಕೆಟ್ ಪಡೆದರು.
ಇನ್ನು 148 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಬಾರಿಸುವ ಮೂಲಕ ಆರಂಭಿಕ ಆಘಾತದಿಂದ ಪಾರು ಮಾಡುವ ಪ್ರಯತ್ನ ಮಾಡಿದರು. ಮತ್ತೊಂದೆಡೆ ರೋಹಿತ್ ಶರ್ಮಾ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು.
ಆದರೆ ತಂಡದ ಮೊತ್ತ 50 ರನ್ ಆಗಿದ್ದ ವೇಳೆ ರೋಹಿತ್ ಶರ್ಮಾ (12) ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಸುಲಭ ಕ್ಯಾಚಿತ್ತು ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಹಾಗೂ ರವೀಂದ್ರ ಜಡೇಜಾ ಟೀಮ್ ಇಂಡಿಯಾಗೆ 36 ರನ್ಗಳ ಉಪಯುಕ್ತ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಮತ್ತೆ ದಾಳಿಗಿಳಿದ ನಸೀಂ ಶಾ ಸೂರ್ಯಕುಮಾರ್ (18) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪಾಕಿಸ್ತಾನಕ್ಕೆ 4ನೇ ಯಶಸ್ಸು ತಂದುಕೊಟ್ಟರು.
16ನೇ ಓವರ್ನಲ್ಲಿ ಟೀಮ್ ಇಂಡಿಯಾದ ಮೊತ್ತ 100 ರನ್ಗಳ ಗಡಿದಾಟಿತು. ಅದರಂತೆ ಅಂತಿಮ 4 ಓವರ್ಗಳಲ್ಲಿ 41 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕ್ರೀಸ್ನಲ್ಲಿದ್ದರು. 17ನೇ ಓವರ್ನಲ್ಲಿ 9 ರನ್ ಕಲೆಹಾಕುವ ಮೂಲಕ ತಂಡದ ಗೆಲುವಿನ ಅಂತರವನ್ನು ಕಡಿಮೆಗೊಳಿಸಿದರು. ಅದರಂತೆ ಕೊನೆಯ 18 ಎಸೆತಗಳಲ್ಲಿ 32 ರನ್ಗಳ ಗುರಿ ಪಡೆಯಿತು. 18ನೇ ಓವರ್ನಲ್ಲಿ ಫೋರ್ ಮತ್ತು ಸಿಕ್ಸ್ ಬಾರಿಸುವ ಮೂಲಕ ಜಡೇಜಾ ಅಬ್ಬರಿಸಿದರು. ಪರಿಣಾಮ ಕೊನೆಯ 2 ಓವರ್ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 21 ರನ್ಗಳು ಬೇಕಿತ್ತು.
19ನೇ ಓವರ್ನಲ್ಲಿ ಮೂರು ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅಲ್ಲದೆ 28 ಎಸೆತಗಳಲ್ಲಿ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧಶತಕ ಜೊತೆಯಾಟವಾಡಿದರು. ಅದರಂತೆ ಕೊನೆಯ ಓವರ್ನಲ್ಲಿ ಭಾರತ ತಂಡಕ್ಕೆ ಕೇವಲ 7 ರನ್ಗಳ ಅವಶ್ಯಕತೆಯಿತ್ತು. ಆದರೆ ನವಾಜ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲೇ ರವೀಂದ್ರ ಜಡೇಜಾ (35) ಕ್ಲೀನ್ ಬೌಲ್ಡ್ ಆದರು. 2ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಂಗಲ್ ತೆಗೆದರು. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಹಾರ್ದಿಕ್ ಪಾಂಡ್ಯ (33) ಟೀಮ್ ಇಂಡಿಯಾಗೆ 5 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.