ಐಸಿಸಿ ಟಿ20 ವಿಶ್ವಕಪ್ನಲ್ಲಿ (T20 World Cup) ಕಣಕ್ಕಿಳಿಯುವ ಮುನ್ನ ಭಾರತಕ್ಕೆ ಆಯೋಜಿಸಿದ್ದ ಎರಡು ಅಧಿಕೃತ ಅಭ್ಯಾಸ ಪಂದ್ಯ ಕೊನೆಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ವಾರ್ಮ್- ಅಪ್ ಮ್ಯಾಚ್ನಲ್ಲಿ ರೋಚಕ ಜಯ ಸಾಧಿಸಿದರೆ, ದ್ವಿತೀಯ ಪಂದ್ಯ ಯಶಸ್ವಿಯಾಗಲಿಲ್ಲ. ಬುಧವಾರ ನ್ಯೂಜಿಲೆಂಡ್ ವಿರುದ್ಧ ಆಯೋಜಿಸಿದ್ದ ಎರಡನೆ ಅಭ್ಯಾಸ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು. ಇದೀಗ ಅಭ್ಯಾಸ ಪಂದ್ಯ ಪೂರ್ಣಗೊಂಡ ಬಳಿಕ ಭಾರತ ಮೆಲ್ಬೋರ್ನ್ಗೆ ತಲುಪಿದೆ. ಅಕ್ಟೋಬರ್ 23 ರಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ (Melbourne) ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕಾಗಿ ರೋಹಿತ್ ಪಡೆ ಎಮ್ಸಿಜಿಗೆ ಕಾಲಿಟ್ಟಿದೆ.
ಯುಜ್ವೇಂದ್ರ ಚಹಲ್ ಅವರು ವಿಮಾನದಲ್ಲಿ ಮೆಲ್ಬೋರ್ನ್ಗೆ ತೆರಳುತ್ತಿರುವ ಫೋಟೋವನ್ನು ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್ ಜೊತೆ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಪೋಸ್ಟ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರು ಮೆಲ್ಬೋರ್ನ್ಗೆ ತೆರಳುತ್ತಿರುವ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಶುಕ್ರವಾರದಿಂದ ಟೀಮ್ ಇಂಡಿಯಾ ಎಮ್ಸಿಜಿಯಲ್ಲಿ ಅಭ್ಯಾಸ ಶುರು ಮಾಡಲಿದೆ.
Perth ✔️
Brisbane ✔️
Preparations ✔️We are now in Melbourne for our first game! #TeamIndia #T20WorldCup pic.twitter.com/SRhKYEnCdn
— BCCI (@BCCI) October 20, 2022
ಇನ್ನು ಆಸ್ಟ್ರೇಲಿಯಾದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ 100 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಸಿದೆ. ಫೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ಶೀತ ಗಾಳಿ ಬೀಸುತ್ತಿದ್ದು, ಇದರಿಂದ ಆಸ್ಟ್ರೇಲಿಯಾದ ಬಹುತೇಕ ಕಡೆ ಮಳೆಯಾಗಲಿದೆ ಎಂದು ವೆದರ್ ರಿಪೋರ್ಟ್ ತಿಳಿಸಿದೆ. ಮುಖ್ಯವಾಗಿ ಬ್ರಿಸ್ಬೇನ್, ಸಿಡ್ನಿ ಮತ್ತು ಮೆಲ್ಬೋರ್ನ್ ಭಾಗದಲ್ಲಿ ಹೆಚ್ಚಿನ ವರ್ಷಧಾರೆಯಾಗಲಿದೆ. ಅದರಲ್ಲೂ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಭಾಗದಲ್ಲಿ ಶೇ. 80 ರಷ್ಟು ಮಳೆಯಾಗಲಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಡೆಯುವುದು ಅನುಮಾನ ಎಂದು ಸ್ಕೈ ನ್ಯೂಸ್ ಹವಾಮಾನಶಾಸ್ತ್ರಜ್ಞ ರಾಬ್ ಶಾರ್ಪ್ ತಿಳಿಸಿದ್ದಾರೆ.
ಒಂದು ವೇಳೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ, ಓವರ್ಗಳ ಕಡಿತದೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಇಲ್ಲಿ ರದ್ದು ಮಾಡಿದರೆ ಮೀಸಲು ದಿನ ಇರುವುದಿಲ್ಲ. ಬದಲಾಗಿ ಉಭಯ ತಂಡಗಳಿಗೂ ತಲಾ 1 ಪಾಯಿಂಟ್ ನೀಡಲಾಗುತ್ತದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಟಿ20 ವಿಶ್ವಕಪ್ ಮಹಾ ಟೂರ್ನಿಯಲ್ಲಿ ಇದುವರೆಗೆ ಒಟ್ಟು ಆರು ಬಾರಿ ಮುಖಾಮುಖಿಯಾಗಿವೆ. ಈ ಆರು ಪಂದ್ಯಗಳಲ್ಲಿ ಪೈಕಿ ಟೀಮ್ ಇಂಡಿಯಾ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕ್ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಪಾಕ್ ಪಡೆ ಗೆಲುವು ಸಾಧಿಸಿದೆ. ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿದ್ದ ತಂಡಗಳ ಎಲ್ಲ ಅಭ್ಯಾಸ ಪಂದ್ಯ ಮುಕ್ತಾಯಗೊಂಡಿದೆ. ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುವ ಮೂಲಕ ಗ್ರೂಪ್ 1 ರಲ್ಲಿ ಮೊದಲ ಸೂಪರ್ 12 ಆರಂಭವಾಗಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
Published On - 7:53 am, Fri, 21 October 22