India vs Pakistan: ಯೆಲ್ಲೋ ಅಲರ್ಟ್ ಘೋಷಿಸಿದ ಆಸ್ಟ್ರೇಲಿಯಾ: ಭಾರತ-ಪಾಕ್ ಪಂದ್ಯ ಡೌಟ್..!
India vs Pakistan: ಮುಖ್ಯವಾಗಿ ಬ್ರಿಸ್ಬೇನ್, ಸಿಡ್ನಿ ಮತ್ತು ಮೆಲ್ಬೋರ್ನ್ ಭಾಗದಲ್ಲಿ ಹೆಚ್ಚಿನ ವರ್ಷಧಾರೆಯಾಗಲಿದೆ. ಅದರಲ್ಲೂ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಭಾಗದಲ್ಲಿ ಶೇ.80 ರಷ್ಟು ಮಳೆಯಾಗಲಿದೆ.
T20 World Cup 2022: ಟಿ20 ವಿಶ್ವಕಪ್ಗೆ ಇದೀಗ ವರುಣನ ಅವಕೃಪೆ ಎದುರಾಗಿದೆ. ಮಳೆಯ ಕಾರಣ ಈಗಾಗಲೇ ಕೆಲ ಅಭ್ಯಾಸ ಪಂದ್ಯಗಳು ರದ್ದಾಗಿವೆ. ಇದೀಗ ಸೂಪರ್-12 ಹಂತದ ಪಂದ್ಯಗಳಿಗೂ ಮಳೆ ಭೀತಿ ಕಾಡುತ್ತಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ 100 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಸಿದೆ. ಫೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ಶೀತ ಗಾಳಿ ಬೀಸುತ್ತಿದ್ದು, ಇದರಿಂದ ಆಸ್ಟ್ರೇಲಿಯಾದ ಬಹುತೇಕ ಕಡೆ ಮಳೆಯಾಗಲಿದೆ ಎಂದು ವೆದರ್ ರಿಪೋರ್ಟ್ ತಿಳಿಸಿದೆ.
ಮುಖ್ಯವಾಗಿ ಬ್ರಿಸ್ಬೇನ್, ಸಿಡ್ನಿ ಮತ್ತು ಮೆಲ್ಬೋರ್ನ್ ಭಾಗದಲ್ಲಿ ಹೆಚ್ಚಿನ ವರ್ಷಧಾರೆಯಾಗಲಿದೆ. ಅದರಲ್ಲೂ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಭಾಗದಲ್ಲಿ ಶೇ.80 ರಷ್ಟು ಮಳೆಯಾಗಲಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯ ನಡೆಯುವುದು ಅನುಮಾನ ಎಂದು ಸ್ಕೈ ನ್ಯೂಸ್ ಹವಾಮಾನಶಾಸ್ತ್ರಜ್ಞ ರಾಬ್ ಶಾರ್ಪ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದ MET ಇಲಾಖೆಯು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಅಂದರೆ ಹೆಚ್ಚಿನ ಮಳೆಯಾಗುವ ಸಂದರ್ಭಗಳಲ್ಲಿ ಮಾತ್ರ ಯೆಲ್ಲೋ ಎಚ್ಚರಿಕೆ ನೀಡಲಾಗುತ್ತದೆ. ಹೀಗಾಗಿ ಮೆಲ್ಬೋರ್ನ್ ಭಾಗದಲ್ಲಿ ನಿರಂತರ ಮಳೆ ಸುರಿದರೆ ಪಂದ್ಯ ನಡೆಯುವುದು ಅನುಮಾನ.
ಇದಕ್ಕೂ ಮುನ್ನ ಅಕ್ಟೋಬರ್ 12 ರಂದು ವೆಸ್ಟ್ ಇಂಡೀಸ್ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಅಭ್ಯಾಸ ಪಂದ್ಯವನ್ನು ಮಳೆಯ ಕಾರಣ ರದ್ದುಗೊಳಿಸಲಾಯಿತು. ಈ ಪಂದ್ಯ ಕೂಡ ಮೆಲ್ಬೋರ್ನ್ನಲ್ಲೇ ನಡೆದಿತ್ತು ಎಂಬುದು ಉಲ್ಲೇಖಾರ್ಹ. ಹಾಗೆಯೇ ಮೆಲ್ಬೋರ್ನ್ನಲ್ಲಿ ನಿಗದಿಯಾಗಿದ್ದ ಜಿಂಬಾಬ್ವೆ vs ನಮೀಬಿಯಾ ಪಂದ್ಯ, ಶ್ರೀಲಂಕಾ vs ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ vs ಯುಎಇ ಪಂದ್ಯಗಳು ಕೂಡ ಮಳೆಯ ಕಾರಣ ರದ್ದಾಗಿತ್ತು.
ಅಂದರೆ ಕಳೆದ ಒಂದು ವಾರದಿಂದ ಮೆಲ್ಬೋರ್ನ್ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ಮಳೆ ಪ್ರಮಾಣ ಅಕ್ಟೋಬರ್ 24 ರವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ನಡೆಯುವುದು ಅನುಮಾನ ಎಂದೇ ಹೇಳಬಹುದು.
ಟಿ20 ವಿಶ್ವಕಪ್ ಆಯೋಜಕರ ಮುಂದಿನ ನಡೆಯೇನು?
ಭಾರತ-ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮ್ಯಾಚ್ ಕ್ಯಾನ್ಸಲ್ ಆಗಲಿದೆ. ಒಂದು ವೇಳೆ ಪಂದ್ಯ ನಡೆಸಲು ಅವಕಾಶವಿದ್ದರೆ ಭಾರತೀಯ ಕಾಲಮಾನ 4.30 ತನಕ ಕಾದು ನೋಡಬಹುದು. ಇದರ ನಡುವೆ ಮಳೆ ನಿಂತರೆ ಓವರ್ ಕಡಿತದೊಂದಿಗೆ ಪಂದ್ಯವನ್ನು ಶುರು ಮಾಡಬಹುದು.
ಇನ್ನು ಪಂದ್ಯ ನಡೆಸಲು ಕಟ್ ಆಫ್ ಟೈಮ್ ನಿಗದಿತ ಪಡಿಸಿದ ಬಳಿಕ ಮಳೆ ನಿಂತರೆ ಉಭಯ ತಂಡಗಳಿಗೂ ತಲಾ 5 ಓವರ್ಗಳ ಪಂದ್ಯವನ್ನು ನಡೆಸಬಹುದು. ಇದಕ್ಕೂ ಅವಕಾಶವಿಲ್ಲದಿದ್ದರೆ ಮಾತ್ರ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಹೀಗೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಇದರ ಬದಲಾಗಿ ಮೀಸಲು ದಿನದಲ್ಲಿ ಪಂದ್ಯವನ್ನು ಮರು ಆಯೋಜನೆ ಮಾಡುವುದಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿಅಭಿಮಾನಿಗಳು ಭಾರತ-ಪಾಕಿಸ್ತಾನ್ ನಡುವೆ ಕನಿಷ್ಠ 5 ಓವರ್ಗಳ ಪಂದ್ಯವಾದರೂ ನಡೆಯಲಿದೆ ಬಯಸುತ್ತಿದ್ದಾರೆ.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಪಾಕಿಸ್ತಾನ ತಂಡ ಹೀಗಿದೆ:
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಖುಷ್ದಿಲ್ ಶಾ , ಮೊಹಮ್ಮದ್ ವಾಸಿಂ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್.