ಭಾರತ ಮತ್ತು ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ನಡುವಣ ಅಭ್ಯಾಸ ಪಂದ್ಯ ಶುರುವಾಗಿದೆ. ಕ್ಯಾನ್ಬೆರಾದ ಮನುಕಾ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ. ಶನಿವಾರದಿಂದ ಶುರುವಾಗಬೇಕಿದ್ದ ಈ ಪಂದ್ಯದ ಮೊದಲ ದಿನದಾಟವು ಮಳೆಗೆ ಅಹುತಿಯಾಗಿತ್ತು. ಇದೀಗ ದ್ವಿತೀಯ ದಿನದಾಟದಲ್ಲಿ ಉಭಯ ತಂಡಗಳು ತಲಾ 50 ಓವರ್ಗಳನ್ನು ಆಡಲಿದೆ. ಈ ಮೂಲಕ ಟೀಮ್ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ಗೆ ಸಿದ್ಧತೆಗಳನ್ನು ಆರಂಭಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಿ ಮೊದಲ ಮ್ಯಾಚ್ ಮುಗಿದಿದೆ. ಇದರ ನಡುವೆ ಅಭ್ಯಾಸ ಪಂದ್ಯವೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಮುಖ್ಯ ಕಾರಣ ಅಡಿಲೇಡ್ ಟೆಸ್ಟ್. ಡಿಸೆಂಬರ್ 6 ರಿಂದ ಶುರುವಾಗಲಿರುವ ಈ ಸರಣಿಯ 2ನೇ ಪಂದ್ಯವು ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಹೊನಲು ಬೆಳಕಿನಲ್ಲಿ ಜರುಗಲಿದ್ದು, ಅದಕ್ಕೂ ಮುನ್ನ ಪಿಂಕ್ ಬಾಲ್ನಲ್ಲಿ ಅಭ್ಯಾಸ ನಡೆಸಲು ಟೀಮ್ ಇಂಡಿಯಾ ನಿರ್ಧರಿಸಿದೆ.
ಏಕೆಂದರೆ ಭಾರತೀಯ ಆಟಗಾರರು ಪಿಂಕ್ ಬಾಲ್ನಲ್ಲಿ ಟೆಸ್ಟ್ ಪಂದ್ಯವಾಡಿ ವರ್ಷ ಕಳೆದಿದೆ. ಹಾಗೆಯೇ ಆಸ್ಟ್ರೇಲಿಯಾ ಪರಿಸ್ಥಿತಿಗೆ ಹೊಂದಿಕ್ಕೊಳ್ಳಲು ಪಿಂಕ್ ಬಾಲ್ನಲ್ಲಿ ಅಭ್ಯಾಸ ಪಂದ್ಯ ಅನಿವಾರ್ಯ. ಅದರಂತೆ ಇದೀಗ ಟೀಮ್ ಇಂಡಿಯಾ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಪಿಂಕ್ ಬಾಲ್ನಲ್ಲಿ ಅಭ್ಯಾಸ ಪಂದ್ಯವಾಡುತ್ತಿದೆ. ಈ ಮೂಲಕ ಅಡಿಲೇಡ್ ಟೆಸ್ಟ್ ಪಂದ್ಯ ಗೆಲ್ಲಲು ಭಾರತ ತಂಡ ಭರ್ಜರಿ ಪ್ಲ್ಯಾನ್ ರೂಪಿಸಿದೆ.
Published On - 9:30 am, Sun, 1 December 24