ಐಪಿಎಲ್ನಲ್ಲಿ ಪ್ರತಿ ತಂಡಗಳಿಗೂ ಒಂದು ತವರು ಮೈದಾನವಿದೆ. ಹೀಗೆ ನಗರ ಮತ್ತು ಮೈದಾನವನ್ನು ಕೇಂದ್ರೀಕರಿಸಿಯೇ ಐಪಿಎಲ್ ತಂಡಗಳನ್ನು ರೂಪಿಸಲಾಗಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಎರಡು ತವರು ಮೈದಾನಗಳನ್ನು ಹೊಂದಿದೆ. ಅಂದರೆ ನಿಗದಿತ ತವರು ಮೈದಾನವಲ್ಲದೇ, ಇತರೆಡೆ ಕೂಡ ತನ್ನ ಹೋಮ್ ಮ್ಯಾಚ್ಗಳನ್ನು ಆಡುತ್ತಿದೆ. ಭವಿಷ್ಯದಲ್ಲಿ ಎರಡು ಹೋಮ್ ಗ್ರೌಂಡ್ಗಳನ್ನು ಹೊಂದಿರುವ ತಂಡಗಳ ಪಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸೇರ್ಪಡೆಯಾಗಲಿದೆ.
ಏಕೆಂದರೆ ಕರ್ನಾಟಕದಲ್ಲಿ 3 ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಳು ನಿರ್ಮಾಣವಾಗಲಿದೆ. ಈಗಾಗಲೇ ಒಂದು ಸ್ಟೇಡಿಯಂನ ಕೆಲಸಗಳು ಆರಂಭವಾಗಿದ್ದು, ಇನ್ನೊಂದರ ಶಂಕು ಸ್ಥಾಪನೆ ಶೀಘ್ರದಲ್ಲ ನೆರವೇರಲಿದೆ. ಹಾಗೆಯೇ ಮತ್ತೊಂದು ಸ್ಟೇಡಿಯಂಗಾಗಿ ರೂಪುರೇಷೆಗಳು ಸಿದ್ಧವಾಗುತ್ತಿದೆ.
ಕೊಡಗು ಕ್ರಿಕೆಟ್ ಸ್ಟೇಡಿಯಂ: ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ತಲೆ ಎತ್ತುತ್ತಿದೆ. ಈಗಾಗಲೆ ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಮಾದರಿಯಲ್ಲಿ ಈ ಮೈದಾನವು ನಿಸರ್ಗದ ನಡುವೆ ನಿರ್ಮಾಣವಾಗುತ್ತಿದೆ. ವಿಶೇಷ ಅಂದರೆ, ಈ ಮೈದಾನವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ತುಸು ದೊಡ್ಡದಾಗಿರಲಿದೆ. ಅಲ್ಲದೆ ಈ ಮೈದಾನದ ಕಾಮಗಾರಿ ಮೂರು-ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ತುಮಕೂರು ಕ್ರಿಕೆಟ್ ಸ್ಟೇಡಿಯಂ: ತುಮಕೂರಿನ ಪಿ.ಗೊಲ್ಲಹಳ್ಳಿ ಮತ್ತು ಸೋರೆಕುಂಟೆ ವ್ಯಾಪ್ತಿಯಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದೆ. 41 ಎಕರೆ ಭೂ ಪ್ರದೇಶದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಡಿ.2 ರಂದು ಶಂಕುಸ್ಥಾಪನೆ ನೆರವರೇಲಿದೆ. ಅಲ್ಲದೆ ಈ ಸುಸಜ್ಜಿತ ಕ್ರೀಡಾಂಗಣವು 2 ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ.
ಮೈಸೂರು ಕ್ರಿಕೆಟ್ ಸ್ಟೇಡಿಯಂ: ಅರಮನೆ ನಗರಿ ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂಬ ಸುದ್ದಿ ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಈ ಸ್ಟೇಡಿಯಂ ನಿರ್ಮಾಣಕಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಇಲವಾಲ ಹೋಬಳಿಯ ಹುಯಿಲಾಳು ಗ್ರಾಮದಲ್ಲಿ 20.8 ಎಕರೆ ಭೂಮಿಯನ್ನು ಗುರುತಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮೈಸೂರಿನಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುವುದನ್ನು ನಿರೀಕ್ಷಿಸಬಹುದು.
ಈ ಮೂರು ಸ್ಟೇಡಿಯಂಗಳು ಲೋಕಾರ್ಪಣೆಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನೊಂದಿಗೆ ಇತರೆ ಮೂರು ಹೋಮ್ ಗ್ರೌಂಡ್ ಆಯ್ಕೆಗಳು ದೊರೆಯಲಿದೆ. ಅದರಲ್ಲೂ ಮುಂದಿನ ಐದು ವರ್ಷದೊಳಗೆ ತುಮಕೂರು ಮತ್ತು ಕೊಡಗು ಕ್ರಿಕೆಟ್ ಸ್ಟೇಡಿಯಂಗಳು ಉದ್ಘಾಟನೆಗೊಳ್ಳುವುದು ಖಚಿತ. ಹೀಗಾಗಿ ಐಪಿಎಲ್ 2028 ರಿಂದ ಆರ್ಸಿಬಿ ಹೊಸ ಹೋಮ್ ಗ್ರೌಂಡ್ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
Published On - 11:55 am, Sun, 1 December 24