
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿರುವ ಟೀಂ ಇಂಡಿಯಾ (India vs South Africa) ಇದೀಗ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲು ಸಜ್ಜಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಇಂದು ಕಟಕ್‌ನಲ್ಲಿ ನಡೆಯುತ್ತಿದೆ. ಈ ಸರಣಿಯೊಂದಿಗೆ ಪ್ರಸ್ತುತ ಟಿ20 ವಿಶ್ವಕಪ್ (T20 World Cup) ಚಾಂಪಿಯನ್ ಆಗಿರುವ ಭಾರತ ತಂಡ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ಭಾರತ ತಂಡವು ವಿಶ್ವಕಪ್‌ಗೆ ಮೊದಲು 10 ಟಿ20 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ನಂತರ, ಇದು ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯನ್ನು ಸಹ ಆಡಲಿದೆ. ಹೀಗಾಗಿ ಟಿ20 ವಿಶ್ವಕಪ್ ದೃಷ್ಟಿಯಿಂದ ಸೂರ್ಯಕುಮಾರ್ (Suryakumar Yadav) ಪಡೆಗೆ ಈ ಸರಣಿ ಪ್ರಮುಖವಾಗಿದೆ.
ಇನ್ನು ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಕಟಕ್‌ನಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗುವುದರಿಂದ ಮಾರ್ಕ್ರಾಮ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಟಾಸ್ ಸೋತು ಮಾತನಾಡಿದ ಸೂರ್ಯಕುಮಾರ್ ಯಾದವ್ ತಂಡದ ಪ್ಲೇಯಿಂಗ್ 11 ರ ಬಗ್ಗೆ ಸ್ಪಷ್ಟನೆ ನೀಡಿದ್ದು ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಪ್ಲೇಯಿಂಗ್ 11 ನಿಂದ ಹೊರಬಿದಿದ್ದಾರೆ. ಇತರ ಮೂವರು ಆಟಗಾರರನ್ನು ಸಹ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿಲ್ಲ.
ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಆಯ್ಕೆಯಾಗಿದ್ದು, ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಲಾಗಿದೆ. ಸಂಜು ಸ್ಯಾಮ್ಸನ್ ಜೊತೆಗೆ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಈ ಪಂದ್ಯದ ಭಾಗವಾಗಿಲ್ಲ.
ಈ ಸರಣಿಯೊಂದಿಗೆ ಏಕದಿನ ಮತ್ತು ಟೆಸ್ಟ್ ನಾಯಕ ಶುಭ್ಮನ್ ಗಿಲ್ ಮತ್ತು ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ತಂಡವನ್ನು ಮತ್ತಷ್ಟು ಬಲಗೊಳಿಸಲಿದೆ. ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದ ಗಿಲ್ ಈಗ ತಂಡಕ್ಕೆ ಮರಳುತ್ತಿದ್ದಾರೆ. ಅಭಿಷೇಕ್ ಶರ್ಮಾ ಅವರೊಂದಿಗೆ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಹಾರ್ದಿಕ್ ಅವರ ಮರಳುವಿಕೆ ಭಾರತಕ್ಕೂ ಅಷ್ಟೇ ಮುಖ್ಯವಾಗಿದೆ. ಏಷ್ಯಾಕಪ್ ಸಮಯದಲ್ಲಿ ಕ್ವಾಡ್ರೈಸೆಪ್ಸ್ ಗಾಯದಿಂದಾಗಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ಹೊರಗುಳಿದಿದ್ದ ಆಲ್‌ರೌಂಡರ್ ಅದ್ಭುತ ಪುನರಾಗಮನ ಮಾಡಿ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಪರ ನಡೆದ ಪಂದ್ಯದಲ್ಲಿ 42 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿದಲ್ಲದೆ, ಬೌಲಿಂಗ್‌ನಲ್ಲಿ ನಾಲ್ಕು ಓವರ್‌ಗಳಲ್ಲಿ 52 ರನ್‌ಗಳಿಗೆ ಒಂದು ವಿಕೆಟ್ ಪಡೆದಿದ್ದರು.
ಟೀಂ ಇಂಡಿಯಾದ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಶಿವಂ ದುಬೆ, ವರುಣ್ ಚಕ್ರವರ್ತಿ, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ ಆಡುವ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಐಡೆನ್ ಮಾರ್ಕ್ರಾಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೆರಾ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಲುಥೋ ಸಿಪಾಮ್ಲಾ, ಲುಂಗಿ ಎನ್‌ಗಿಡಿ, ಅನ್ರಿಚ್ ನೋಕಿಯಾ.
Published On - 6:54 pm, Tue, 9 December 25