ಡಿಸೆಂಬರ್ 19 ರಂದು ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ಎರಡನೇ ಏಕದಿನ ಪಂದ್ಯ ನಡೆಯಲ್ಲಿದೆ. ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಪಂದ್ಯದಲ್ಲಿ ಭಾರತದ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ರನ್ ಗಳಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ತಂಡ ಕೇವಲ 117 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ್ದ ಭಾರತ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವುದರ ಜೊತೆಗೆ ಏಕದಿನ ಸರಣಿಯನ್ನು ಸೀಲ್ ಮಾಡುವ ಇರಾದೆಯಲ್ಲಿದೆ. ಹೀಗಾಗಿ ಬಲಿಷ್ಠ ಪಡೆಯನ್ನು ಕಟ್ಟಿಕೊಂಡು ಕಣಕ್ಕಿಳಿಯುವ ಅಗತ್ಯತೆ ನಾಯಕ ಕೆಎಲ್ ರಾಹುಲ್ಗಿದೆ (KL Rahul).
ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿ ಕಣಕ್ಕಿಳಿದಿದ್ದ ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸಿದ್ದರು. ಅಯ್ಯರ್ 45 ಎಸೆತಗಳಲ್ಲಿ 6 ಬೌಂಡರಿಗಳ ಜೊತೆಗೆ ಒಂದು ಸಿಕ್ಸರ್ ಸಹಿತ 52 ರನ್ ಗಳಿಸಿದರು. ಆದರೆ ಇದೀಗ ಶ್ರೇಯಸ್ ಅಯ್ಯರ್ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಆಡುತ್ತಿಲ್ಲ. ಡಿಸೆಂಬರ್ 26 ರಿಂದ ಆರಂಭವಾಗಲಿರುವ ಟೆಸ್ಟ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಕೂಡ ಸ್ಥಾನ ಪಡೆದಿರುವುದರಿಂದ ಅವರು ಅದಕ್ಕೆ ಸಿದ್ಧರಾಗಲು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ. ಆದರೆ ಈಗ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದು ಪ್ರಶ್ನೆಯಾಗಿದೆ.
IND vs SA, 2nd ODI: ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತದ ದಾಖಲೆ ಹೇಗಿದೆ ಗೊತ್ತಾ?
ವಾಸ್ತವವಾಗಿ, ಅಯ್ಯರ್ ಬದಲಿಗೆ ರಜತ್ ಪಾಟಿದಾರ್ ಮತ್ತು ರಿಂಕು ಸಿಂಗ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಇಬ್ಬರೂ ಆಟಗಾರರು ಇನ್ನೂ ಭಾರತ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ರಿಂಕು ಸಿಂಗ್ ಅವರು ಟಿ20 ಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ರಜತ್ ಪಾಟಿದಾರ್ ಇನ್ನೂ ಇದಕ್ಕಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ನಾಯಕ ಕೆಎಲ್ ರಾಹುಲ್ ಯಾರಿಗೆ ಅವಕಾಶ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಟಿ20 ಸರಣಿಯಲ್ಲಿ ರಿಂಕು ಸಿಂಗ್ ತೋರಿದ ಪ್ರದರ್ಶನದ ಪ್ರಕಾರ ಸೆಪ್ಟೆಂಬರ್ 19 ರಂದು ರಿಂಕುಗೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶವೂ ಸಿಗಬಹುದು. ಉಳಿದಂತೆ ಆಡುವ ಹನ್ನೊಂದರಲ್ಲಿ ಯಾವುದೇ ಬದಲಾವಣೆ ಇಲ್ಲದಿರಬಹುದು.
ಇನ್ನು ಎರಡನೇ ಪಂದ್ಯದ ಟೈಮಿಂಗ್ ಕೂಡ ಬದಲಾಗಲಿದೆ. ಮೊದಲ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಿದ್ದು, ಅದಕ್ಕೂ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1 ಗಂಟೆಗೆ ಟಾಸ್ ನಡೆದಿತ್ತು. ಆದರೆ ಎರಡನೇ ಮತ್ತು ಮೂರನೇ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದ್ದು, ಟಾಸ್ 4 ಗಂಟೆಗೆ ನಡೆಯಲಿದೆ.
ಭಾರತ ಸಂಭಾವ್ಯ ತಂಡ: ರುತುರಾಜ್ ಗಾಯಕ್‌ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಅವೇಶ್ ಖಾನ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ