
ಗುವಾಹಟಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 201 ರನ್ಗಳಿಸಿ ಟೀಮ್ ಇಂಡಿಯಾ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಬರೋಬ್ಬರಿ 489 ರನ್ ಕಲೆಹಾಕಿದ್ದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾಗೆ ಯಶಸ್ವಿ ಜೈಸ್ವಾಲ್ (58) ಹಾಗೂ ಕೆಎಲ್ ರಾಹುಲ್ (22) ಉತ್ತಮ ಆರಂಭ ಒದಗಿಸಿದ್ದರು. ಆದರೆ ಆ ಬಳಿಕ ಬಂದ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 15 ರನ್ಗಳಿಸಿದರೆ, ಧ್ರುವ್ ಜುರೆಲ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ರಿಷಭ್ ಪಂತ್ ಕಲೆಹಾಕಿದ್ದು ಕೇವಲ 7 ರನ್ಗಳು ಮಾತ್ರ.
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ 6 ರನ್ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ 72 ರನ್ಗಳ ಜೊತೆಯಾಟವಾಡಿದರು.
ಆದರೆ ಮೂರನೇ ದಿನದಾಟದ ಭೋಜನಾ ವಿರಾಮದ ಬಳಿಕ ವಾಷಿಂಗ್ಟನ್ ಸುಂದರ್ (45) ವಿಕೆಟ್ ಪಡೆಯುವಲ್ಲಿ ಸೈಮ್ ಹರ್ಮರ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಕುಲ್ದೀಪ್ ಯಾದವ್ (19) ಕೂಡ ಔಟಾದರು. ಇನ್ನು ಜಸ್ಪ್ರೀತ್ ಬುಮ್ರಾ (5) ಕ್ಯಾಚ್ ನೀಡುವುದರೊಂದಿಗೆ ಟೀಮ್ ಇಂಡಿಯಾ 201 ರನ್ಗಳಿಸಿ ಆಲೌಟ್ ಆಯಿತು. ಸೌತ್ ಆಫ್ರಿಕಾ ಪರ 19.5 ಓವರ್ಗಳನ್ನು ಎಸೆದ ಮಾರ್ಕೊ ಯಾನ್ಸೆನ್ 48 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು.
ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 288 ರನ್ಗಳ ಹಿನ್ನಡೆ ಅನುಭವಿಸಿದ್ದರೂ ಸೌತ್ ಆಫ್ರಿಕಾ ತಂಡ ಫಾಲೋಆನ್ ಹೇರದೇ ಅಚ್ಚರಿ ಮೂಡಿಸಿದ್ದಾರೆ. ಅಂದರೆ ಎದುರಾಳಿ ತಂಡವು ಮೊದಲ ಇನಿಂಗ್ಸ್ನಲ್ಲಿ 200 ರನ್ಗಳ ಹಿನ್ನಡೆ ಅನುಭವಿಸಿದರೆ, ಆ ತಂಡವನ್ನು ಮೊದಲು ದ್ವಿತೀಯ ಇನಿಂಗ್ಸ್ ಆಡಲು ಆಹ್ವಾನಿಸಬಹುದು. ಆದರೆ ಟೆಂಬಾ ಬವುಮಾ ಫಾಲೋಆನ್ ಹೇರದೆ ಮತ್ತೆ ಬ್ಯಾಟಿಂಗ್ ನಡೆಸಲು ನಿರ್ಧರಿಸಿದ್ದಾರೆ. ಅದರಂತೆ 288 ರನ್ಗಳ ಮುನ್ನಡೆಯೊಂದಿಗೆ ಸೌತ್ ಆಫ್ರಿಕಾ ದ್ವಿತೀಯ ಇನಿಂಗ್ಸ್ ಆರಂಭಿಸಲಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.
ಇದನ್ನೂ ಓದಿ: ಟ್ರಾವಿಸ್ ಹೆಡ್ ಸಿಡಿಲಬ್ಬರದಿಂದ ಆಸ್ಟ್ರೇಲಿಯಾಗೆ 17 ಕೋಟಿ ರೂ. ನಷ್ಟ!
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
Published On - 3:13 pm, Mon, 24 November 25