ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ, ದಕ್ಷಿಣ ಆಫ್ರಿಕಾ ಆಟಗಾರರು ಅದ್ಭುತ ಬೌಲಿಂಗ್ ಮತ್ತು ಅತ್ಯುತ್ತಮ ಫೀಲ್ಡಿಂಗ್ ಗಮನ ಸೆಳೆದಿದ್ದಾರೆ. ಸೆಂಚುರಿಯನ್ ಟೆಸ್ಟ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾದ ಆಟಗಾರರು ಜೋಹಾನ್ಸ್‌ಬರ್ಗ್‌ನಲ್ಲಿ ಕ್ರೀಸ್ ಕಚ್ಚಿ ನಿಲ್ಲಲಾಗಲಿಲ್ಲ. ಬೆನ್ನು ನೋವಿನ ಕಾರಣ ತಂಡದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿಯ ಬದಲಿಗೆ ನಾಯಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ (50) ಮಾತ್ರ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಇನ್ನು ಅಂತಿಮ ಹಂತದಲ್ಲಿ ಅಶ್ವಿನ್ 46 ರನ್ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಅದರಂತೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 202 ರನ್ಗಳಿಸಿದೆ.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ ಒಂದಷ್ಟು ಹೊತ್ತು ಕ್ರೀಸ್ನಲ್ಲಿದ್ದರು. 53 ಎಸೆತಗಳನ್ನು ಎದುರಿಸಿದ ವಿಹಾರಿ 20 ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದರು. ಆದರೆ ಈ ಹಂತದಲ್ಲಿ ಕಗಿಸೊ ರಬಾಡ ಎಸೆದ 39ನೇ ಓವರ್‌ನಲ್ಲಿ ಹನುಮ ವಿಹಾರಿ ಔಟಾಗಿದ್ದರು. ಅದು ಕೂಡ ರಸ್ಸಿ ವಂಡೆರ್ ಡುಸ್ಸೆನ್ ಹಿಡಿದ ಅಧ್ಭುತ ಕ್ಯಾಚ್ನಿಂದಾಗಿ ಎಂಬುದು ವಿಶೇಷ.
ಹೌದು, ರಬಾಡ ಎಸೆತವನ್ನು ಸರಿಯಾಗಿ ಗುರುತಿಸಲು ಎಡವಿದ ಹನುಮ ವಿಹಾರಿ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಆದರೆ ಬ್ಯಾಟ್ಗೆ ತಾಗಿದ ಚೆಂಡು ಶಾರ್ಟ್ ಲೆಗ್ನತ್ತ ಚಿಮ್ಮಿತ್ತು. ಈ ವೇಳೆ ಅಲ್ಲೇ ಫೀಲ್ಡ್ನಲ್ಲಿದ್ದ ವಂಡೆರ್ ಡುಸ್ಸೆನ್ ಅದ್ಭುತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿದರು. ಇದರೊಂದಿಗೆ ಹನುಮ ವಿಹಾರಿ ಇನಿಂಗ್ಸ್ ಕೂಡ ಅಂತ್ಯವಾಗಿತ್ತು. ರಸ್ಸಿ ವಂಡೆರ್ ಡುಸ್ಸೆನ್ ಹಿಡಿದಿರುವ ಈ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾರ್ಟ್ ಲೆಗ್ನಲ್ಲಿದ್ದ ಡುಸ್ಸೆನ್ ಅವರ ಟೈಮಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
That @Rassie72 catch ? #SAvIND #FreedomTestSeries #BetwayTestSeries #BePartOfIt pic.twitter.com/TKXjau1YkZ
— Cricket South Africa (@OfficialCSA) January 3, 2022
ಕಡಿಮೆ ಮೊತ್ತಕ್ಕೆ ಟೀಮ್ ಇಂಡಿಯಾ ಆಲೌಟ್!
ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಭಾರತ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 26 ರನ್ಗಳಿಗೆ ಮೊದಲಿಗರಾಗಿ ಹೊರನಡೆದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (3) ಹಾಗೂ ಅಜಿಂಕ್ಯ ರಹಾನೆ (0) ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಸಂಪೂರ್ಣ ರಕ್ಷಣಾತ್ಮಕ ಆಟವಾಡಿದರು.
ಇನ್ನು ಹನುಮ ವಿಹಾರಿ (20) ಹಾಗೂ ರಿಷಭ್ ಪಂತ್ 17) ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರೂ ದೊಡ್ಡ ಮೊತ್ತಗಳಿಸಲು ಸಾಧ್ಯವಾಗಲಿಲ್ಲ. ಇದಾಗ್ಯೂ ರಾಹುಲ್ ಜೊತೆಗೂಡಿದ ಅಶ್ವಿನ್ ತಂಡಕ್ಕೆ ಆಸರೆಯಾದರು. 133 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ ಅರ್ಧಶತಕ ಪೂರೈಸಿದರು. ಹಾಗೆಯೇ ಅಶ್ವಿನ್ 50 ಎಸೆತಗಳಲ್ಲಿ ಬಿರುಸಿನ 46 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಅದರಂತೆ ಅಂತಿಮವಾಗಿ ಟೀಮ್ ಇಂಡಿಯಾ 202 ರನ್ಗಳಿಸಿತು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(India vs south africa 2nd test: Rassie Van Der Dussen takes brilliant catch of hanuma vihari video viral)
Published On - 10:06 pm, Mon, 3 January 22