5 ಪಂದ್ಯಗಳ ಟಿ20 ಸರಣಿ (T20 series)ಯ ಅಂತಿಮ ಪಂದ್ಯ ಭಾನುವಾರ ಬೆಂಗಳೂರಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಎರಡೂ ತಂಡಗಳು 2-2ರಲ್ಲಿ ಸರಣಿ ಸಮಬಲ ಸಾಧಿಸಿವೆ. ಹೀಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಕೊನೆಯ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಕಣ್ಣಿಟ್ಟಿವೆ. ಸರಣಿಯ ಮೊದಲ ಎರಡು ಪಂದ್ಯಗಳನ್ನು ಪ್ರವಾಸಿ ತಂಡ ಗೆದ್ದುಕೊಂಡಿತ್ತು, ಆದರೆ ಆ ನಂತರ ಭಾರತ ತಂಡವು ಸೆಡ್ಡು ಹೊಡೆದು ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಿತು. ಇದೀಗ ಅಂತಿಮ ಪಂದ್ಯದಲ್ಲಿ ಆಡುವ ಇಲೆವೆನ್ ತಂಡವನ್ನು ಕಣಕ್ಕಿಳಿಸುವುದೇ ಭಾರತದ ನಾಯಕ ರಿಷಬ್ ಪಂತ್ (Rishabh Pant) ಮುಂದಿರುವ ದೊಡ್ಡ ಸವಾಲು. ವಾಸ್ತವವಾಗಿ, ಮೊದಲ ಎರಡು ಪಂದ್ಯಗಳಲ್ಲಿ ಸೋತರೂ, ಪಂತ್ ಮೂರನೇ ಮತ್ತು ನಾಲ್ಕನೇ T20 ಪಂದ್ಯಗಳ ಆಡುವ XI ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ. ಅವರ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು, ಆದರೆ ಈಗ ಅವರ ಮುಂದಿರುವ ದೊಡ್ಡ ಸವಾಲೆಂದರೆ, ಅಂತಿಮ ಪಂದ್ಯದ ಆಡುವ XI ಅನ್ನು ಪಂತ್ ಬದಲಾಯಿಸುತ್ತಾರೆಯೇ ಎಂಬುದು.
ಪಂತ್ ಮತ್ತು ಅಯ್ಯರ್ ಕಳಪೆ ಫಾರ್ಮ್
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಅವರ ಬ್ಯಾಟ್ ಬಿರುಸಾಗಿ ಸಾಗಿತ್ತು. ಅವೇಶ್ ಖಾನ್, ಹರ್ಷಲ್ ಪಟೇಲ್ ಮತ್ತು ಯುಜುವೇಂದ್ರ ಚಾಹಲ್ ಕೂಡ ಫಾರ್ಮ್‌ಗೆ ಬಂದಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ, ಮೂರನೇ ಪಂದ್ಯದಲ್ಲಿ ರಿತುರಾಜ್ ಗಾಯಕ್ವಾಡ್ ಅರ್ಧಶತಕ ಗಳಿಸಿದರು. ಆದರೆ, ನಾಲ್ಕನೇ ಪಂದ್ಯದಲ್ಲಿ ಅವರು ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಅದೇ ಸಮಯದಲ್ಲಿ, ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ 76, ಎರಡನೇ ಪಂದ್ಯದಲ್ಲಿ 34, ಮೂರನೇ ಪಂದ್ಯದಲ್ಲಿ 54 ಮತ್ತು ನಾಲ್ಕನೇ ಪಂದ್ಯದಲ್ಲಿ 27 ರನ್ ಗಳಿಸಿದರು. ಭಾರತ ತಂಡದಲ್ಲಿ ಯಾರಾದರೂ ಫಾರ್ಮ್‌ಗೆ ಮರಳಲು ಸಾಧ್ಯವಾಗದಿದ್ದರೆ ಅದು ನಾಯಕ ಪಂತ್ ಮತ್ತು ಶ್ರೇಯಸ್ ಅಯ್ಯರ್.
ಹೂಡಾಗೆ ಅವಕಾಶ
ಕಳೆದ 4 ಪಂದ್ಯಗಳಲ್ಲಿ ಬೇಜವಾಬ್ದಾರಿ ಹೊಡೆತಗಳನ್ನು ಆಡುವ ಮೂಲಕ ಪಂತ್ ಒಂದೇ ರೀತಿಯಲ್ಲಿ ಔಟಾಗುತ್ತಿದ್ದಾರೆ. ಈ ಸರಣಿಯಲ್ಲಿ ಅವರು 29, 5, 6 ಮತ್ತು 17 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದೇ ಸಮಯದಲ್ಲಿ, ಅಯ್ಯರ್ ಈ ಸರಣಿಯಲ್ಲಿ 36, 40, 14 ಮತ್ತು 4 ರನ್ ಗಳಿಸಿದರು. ಇಂತಹ ಪರಿಸ್ಥಿತಿಯಲ್ಲಿ ಪಂತ್ ಫೈನಲ್ನಲ್ಲಿ ಅಯ್ಯರ್ ರೂಪದಲ್ಲಿ ಬದಲಾವಣೆ ಮಾಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಐಪಿಎಲ್ 2022 ರಲ್ಲಿ ಅದ್ಭುತ ಆಟ ಪ್ರದರ್ಶಿಸಿದ ದೀಪಕ್ ಹೂಡಾ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
5 ನೇ T20I ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ / ದೀಪಕ್ ಹೂಡಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಮತ್ತು ಯುಜ್ವೇಂದ್ರ ಚಾಹಲ್.
Published On - 4:00 pm, Sat, 18 June 22