ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿರುವ ರೋಹಿತ್ ಪಡೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ಕಂಡಿತು. ಈ ಮೂಲಕ ಸೆಮಿ ಫೈನಲ್ ರೇಸ್ನಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಂಡಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಆಡಲಿದೆ. ಆದರೆ, ಇದಕ್ಕೂ ಮೊದಲು ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 12:30ಕ್ಕೆ ಪರ್ತ್ನಲ್ಲಿ ಹಿಟ್ಮ್ಯಾನ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಗ್ರೂಪ್ 2 ರಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 30 ಭಾನುವಾರದಂದು ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30 ಕ್ಕೆ ಈ ಕದನ ಶುರುವಾಗಲಿದೆ. ಇದಕ್ಕೂ ಮುನ್ನ ಇಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದು ಪತ್ರಕರ್ತರು ಕೇಳುವ ಕೆಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಜೊತೆಗೆ ತಂಡದಲ್ಲಿನ ಬದಲಾವಣೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಭಾರತ- ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ಗೆ ಎದುರಾಗಬಹುದಾದ ಪ್ರಶ್ನೆಗಳ ಪೈಕಿ ಮುಖ್ಯವಾಗಿ ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಇರುವುದು ಖಚಿತ. ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ಕಳೆದ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದರಿಂದ ತಂಡ ಉತ್ತಮ ಆರಂಭ ಕೂಡ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಏನಾದರು ಬದಲಾವಣೆ ಮಾಡುವ ಸಂಭವವಿದೆಯೇ ಎಂಬ ಬಗ್ಗೆ ಮಾಹಿತಿ ಬಿಚ್ಚಿಡಲಿದ್ದಾರೆ. ರಾಹುಲ್ ವಿಚಾರದಲ್ಲಿ ರೋಹಿತ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಟಿ20 ವಿಶ್ವಕಪ್ 2022 ರಲ್ಲಿ ಟೀಮ್ ಇಂಡಿಯಾ ಆಡಿದ ಎರಡೂ ಪಂದ್ಯದಲ್ಲಿ ಜಯಿಸಿ +1.425 ರನ್ರೇಟ್ ಹೊಂದಿ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಆಫ್ರಿಕಾ ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದರಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ +5.200 ರನ್ರೇಟ್ನೊಂದಿಗೆ 3 ಅಂಕ ಪಡೆದು ಎರಡನೇ ಸ್ಥಾನಲ್ಲಿದೆ. ಆಫ್ರಿಕಾ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 99 ರನ್‌ಗಳಿಗೆ ಆಲೌಟ್ ಮಾಡಿತ್ತು. ಜಿಂಬಾಬ್ವೆ ವಿರುದ್ಧದ ಮೊದಲನೇ ಪಂದ್ಯದಲ್ಲಿ ಅದೃಷ್ಟ ಕೈಕೊಟ್ಟಿದ್ದರಿಂದ, ಮಳೆಯಾದ ಕಾರಣ ಗೆಲುವಿನಿಂದ ತಪ್ಪಿಸಿಕೊಂಡಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 104 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿತ್ತು.
ಆಫ್ರಿಕಾ ತಂಡದಲ್ಲಿ ನಾಯಕ ತೆಂಬಾ ಬವುಮಾ ಬಿಟ್ಟರೆ ಉಳಿದ ಬ್ಯಾಟರ್ಗಳು ಉತ್ತಮ ಫಾರ್ಮ್ನಲ್ಲಿದ್ದಾರೆ. ರಿಲೀ ರೊಸೊವ್, ಕ್ವಿಂಟನ್ ಡಿ ಕಾಕ್, ಆ್ಯಡೆನ್ ಮರ್ಕ್ರಮ್, ಡೇವಿಡ್ ಮಿಲ್ಲರ್ ಬ್ಯಾಟ್ನಿಂದ ರನ್ ಬರುತ್ತಿದೆ. ಅದರಲ್ಲೂ ಡಿ ಕಾಕ್ ಮತ್ತು ರೊಸೊವ್ ಸ್ಫೋಟಕ ಆಟಗಾರರಾಗಿದ್ದು ಭಾರತಕ್ಕೆ ಅಪಾಯಕಾರಿಯಾಗಬಲ್ಲರು. ಆನ್ರಿಚ್ ನಾರ್ಟ್ಜೆ, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಶಂಸಿ, ಕೇಶವ್ ಮಹಾರಾಜ್ ಅವರಂತಹ ಬೌಲರ್ಗಳು ಕೂಡ ಇದ್ದಾರೆ.
Published On - 8:14 am, Sat, 29 October 22