
ಭಾರತ ವಿರುದ್ಧ ದಕ್ಷಿಣ ಆಫ್ರಿಕಾ (India vs South Africa) ಟೆಸ್ಟ್ ಸರಣಿ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಡಬ್ಲ್ಯುಟಿಸಿಯನ್ನು ( WTC Points Table) ಗಮನದಲ್ಲಿಟ್ಟುಕೊಂಡು ಈ ಸರಣಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡಕ್ಕೂ ಬಹಳ ಮುಖ್ಯವಾಗಲಿದೆ. ಈ ಸರಣಿಯನ್ನು ಜಯಿಸುವ ತಂಡಕ್ಕೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನ ಸಿಗಲಿದೆ. ಭಾರತ ತನ್ನ ಕೊನೆಯ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ವೈಟ್‌ವಾಶ್ ಮಾಡಿತ್ತು. ಇತ್ತ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ವಿರುದ್ಧದ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿ ಇದೀಗ ಭಾರತಕ್ಕೆ ಬಂದಿಳಿದೆ.
ಶುಭಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಪ್ರಸ್ತುತ ಶೇಕಡಾ 61.90 ಅಂಕಗಳನ್ನು ಹೊಂದಿದೆ. ಪ್ರಸ್ತುತ, ಆಸ್ಟ್ರೇಲಿಯಾ ಶೇಕಡಾ 100 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಶೇಕಡಾ 66.67 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಬಯಸಿದರೆ, ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 2-0 ಅಂತರದಿಂದ ಸೋಲಿಸಬೇಕಾಗುತ್ತದೆ.
ಆದಾಗ್ಯೂ ಈ ಸರಣಿ ಡ್ರಾದಲ್ಲಿ ಕೊನೆಗೊಂಡರೂ, ಭಾರತಕ್ಕೆ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಒಂದು ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ, ಟೀಂ ಇಂಡಿಯಾ ಗರಿಷ್ಠ ಶೇಕಡಾ 62.96 ಅಂಕಗಳನ್ನು ತಲುಪಲು ಸಾಧ್ಯವಾಗುತ್ತದೆ. ಈ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ಗೆದ್ದರೆ, ತಂಡದ ಗೆಲುವಿನ ಶೇಕಡಾವಾರು 70.37 ರಷ್ಟು ಆಗಲಿದೆ. ಇದರಿಂದ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವನ್ನು ಹಿಂದಿಕ್ಕಿ ಶುಭ್ಮನ್ ಗಿಲ್ ಪಡೆ ಅಗ್ರ -2 ರಲ್ಲಿ ಸ್ಥಾನ ಪಡೆಯುತ್ತದೆ. ಒಂದು ವೇಳೆ ಸರಣಿ 1-1 ರಿಂದ ಸಮಬಲದಲ್ಲಿ ಕೊನೆಗೊಂಡರೆ, ಟೀಂ ಇಂಡಿಯಾ ಕೇವಲ 59.25 ರ ಗೆಲುವಿನ ಶೇಕಡಾವಾರು ಹೊಂದಲಿದೆ.
ಇಂಜುರಿ ನಡುವೆಯೂ ಟೆಸ್ಟ್ನಲ್ಲಿ ಟಿ20 ಕ್ರಿಕೆಟ್ ಆಡಿದ ರಿಷಭ್ ಪಂತ್; ವಿಡಿಯೋ
ದಕ್ಷಿಣ ಆಫ್ರಿಕಾ ಪ್ರಸ್ತುತ 50 ರ ಗೆಲುವಿನ ಶೇಕಡಾವಾರು ಹೊಂದಿದೆ. ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದರೆ, ಅದರ ಗೆಲುವಿನ ಶೇಕಡಾವಾರು 75 ಆಗಲಿದೆ. ಹಾಗೆಯೇ ಸರಣಿ 1-1 ಅಂತರದಲ್ಲಿ ಡ್ರಾ ಆದರೆ ಗೆಲುವಿನ ಶೇಕಡಾವಾರುವಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದಾಗ್ಯೂ, ಆಫ್ರಿಕಾ ತಂಡ ಸರಣಿಯನ್ನು 0-2 ಅಂತರದಲ್ಲಿ ಸೋತರೆ, ಅದರ ಗೆಲುವಿನ ಶೇಕಡಾವಾರು ಕೇವಲ 25 ಕ್ಕೆ ಕುಸಿಯಲಿದೆ. ಒಂದು ಪಂದ್ಯ ಟೈ ಆದರೆ ಮತ್ತು ಭಾರತ ಇನ್ನೊಂದು ಪಂದ್ಯವನ್ನು ಗೆದ್ದರೆ, ದಕ್ಷಿಣ ಆಫ್ರಿಕಾ ಶೇಕಡಾವಾರು 33.33 ರಷ್ಟಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ