U19 World Cup 2022: ಯಶ್ ಧುಲ್ ಭರ್ಜರಿ ಆಟ: ಅಂಡರ್-19 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಭಾರತಕ್ಕೆ ಗೆಲುವು

| Updated By: Vinay Bhat

Updated on: Jan 16, 2022 | 7:48 AM

India U19 vs South Africa U19: ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ವಿರುದ್ಧ 45 ರನ್​ಗಳ ಜಯದೊಂದಿಗೆ ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ಭರ್ಜರಿ ಶುಭಾರಂಭ ಮಾಡಿದೆ. ನಾಯಕ ಯಶ್ ಧುಲ್ ಅವರ ಸಮಯೋಚಿತ ಬ್ಯಾಟಿಂಗ್ ಜೊತೆಗೆ ವಿಕ್ಕಿ ಒಸ್ತ್​ವಲ್ ಮತ್ತು ರಾಜ್ ಬವ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಜಯ ಸಾಧಿಸಿತು.

U19 World Cup 2022: ಯಶ್ ಧುಲ್ ಭರ್ಜರಿ ಆಟ: ಅಂಡರ್-19 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಭಾರತಕ್ಕೆ ಗೆಲುವು
India U19 vs South Africa U19
Follow us on

ವೆಸ್ಟ್​ ಇಂಡೀಸ್​ನಲ್ಲಿ ಆರಂಭವಾಗಿರುವ ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ (ICC Under 19 World Cup) ಭಾರತ ಕಿರಿಯರ ತಂಡ ಭರ್ಜರಿ ಆಗಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲೇ ಭಾರತ ಅಂಡರ್-19 ತಂಡ ದಕ್ಷಿಣ ಆಫ್ರಿಕಾ ಅಂಡರ್-19 (India U19 vs South Africa U19) ವಿರುದ್ಧ 45 ರನ್​ಗಳ ಅಮೋಘ ಗೆಲುವು ಸಾಧಿಸಿದೆ. ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಯಕ ಯಶ್ ಧುಲ್ ಅವರ ಸಮಯೋಚಿತ ಬ್ಯಾಟಿಂಗ್ ಜೊತೆಗೆ ವಿಕ್ಕಿ ಒಸ್ತ್​ವಲ್ ಮತ್ತು ರಾಜ್ ಬವ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಜಯ ಸಾಧಿಸಿದೆ. ಈ ಮೂಲಕ ಬಿ ಗುಂಪಿನ ಪಾಯಿಂಟ್ ಟೇಬಲ್​ನಲ್ಲಿ ಭಾರತ ಅಂಡರ್-19 ತಂಡ ಅಗ್ರಸ್ಥಾನದಲ್ಲಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 11 ರನ್ ಆಗುವ ಹೊತ್ತಿಗೆನೇ ಓಪನರ್​ಗಳಾದ ಅಂಗ್‌ಕ್ರಿಶ್ ರಘುವಂಶಿ(5), ಹರ್ನೂರ್ ಸಿಂಗ್(1) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ಶೈಕ್ ರಶೀದ್ ಜೊತೆಯಾದ ನಾಯಕ ಯಶ್ ಧುಲ್ (Yash Dhull) ಎಚ್ಚರಿಕೆಯ ಆಟವಾಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 71 ರನ್​ಗಳ ಜೊತೆಯಾಟ ಆಡಿತು. ರಶೀದ್ 54 ಎಸೆತಗಳಲ್ಲಿ 31 ರನ್​ಗೆ ಔಟಾದರು.

ನಂತರ ಯಶ್ ಜೊತೆ ನಿಶಾಂತ್ ಸಿಂಧು (37) ಹಾಗೂ ರಾಜ್ ಬವ (13) ಕೆಲಹೊತ್ತು ಕ್ರೀಸ್​ನಲ್ಲಿ ಜೊತೆಗಿದ್ದರು. ಇದರ ನಡುವೆ ನಾಯಕ ಯಶ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ಅತ್ಯುತ್ತಮ ಆಟವಾಡಿದ ಯಶ್ ತಂಡದ ಮೊತ್ತವನ್ನು 200ರ ಅಂಚಿಗೆ ತಂದಿಟ್ಟು ನಿರ್ಗಮಿಸಿದರು. 100 ಎಸೆತಗಳಲ್ಲಿ 11 ಬೌಂಡರಿ ಬಾರಿಸಿ ಇವರು 82 ರನ್ ಗಳಿಸಿದ್ದಾಗ ರನೌಟ್​ಗೆ ಬಲಿಯಾಗಬೇಕಾಯಿತು. ಕೌಶಲ್ ತಾಂಬೆ 35 ರನ್ ಸಿಡಿಸಿದರು. ಅಂತಿಮವಾಗಿ ಭಾರತ 46.5 ಓವರ್​ಗಳಲ್ಲಿ 232 ರನ್​ಗೆ ಆಲೌಟ್ ಆಯಿತು. ಆಫ್ರಿಕಾ ಪರ ಮ್ಯಾಥ್ಯು ಬೋಸ್ಟ್ 3 ವಿಕೆಟ್ ಕಿತ್ತರು.

ಸಾಧಾರಣ ಗುರಿ ಬೆನ್ನಟ್ಟಿದ ಆಫ್ರಿಕಾಕ್ಕೆ ಭಾರತ ಮೊದಲ ಓವರ್​ನಲ್ಲೇ ಶಾಕ್ ನೀಡಿತು. 4ನೇ ಎಸೆತದಲ್ಲಿ ಬೌಲರ್‌ ರಾಜ್ಯವರ್ಧನ್‌ ಹಂಗಾರ್ಕರ್‌ ಅವರು ಜಾನ್‌ ಕನ್ನಿಂಗ್ಯಾಮ್‌(0) ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ವ್ಯಾಲೆಂಟೈನ್ ಟೈಮ್ 25 ಗಳಿಸಿ ನಿರ್ಗಮಿಸಿದರು. ಡೆವಾಲ್ಡ್‌ ಬ್ರೆವೀಸ್‌ 65 ರನ್ ಬಾರಿಸಿ ಗೆಲುವಿಗೆ ಹೋರಾಟ ನಡೆಸಿದರೂ ಇತರ ಬ್ಯಾಟರ್​ಗಳು ಸಾಥ್ ನೀಡಲಿಲ್ಲ. ಜಿಜೆ ಮಾರೀ 8, ನಾಯಕ ಜಾರ್ಜ್‌ ವ್ಯಾನ್ ಹೀರ್ಡೆನ್‌ 36, ಆಂಡಿಲೆ ಸಿಮೆಲೆನ್ 6, ಮಿಕ್ಕಿ ಕೊಪೆಲ್ಯಾಂಡ್‌ 1, ಕಡೆನ್‌ ಸೊಲೊಮಾನ್ಸ್‌ 0, ಮ್ಯಾಥೀವ್‌ ಬೊಸ್ಟ್‌ 8, ಲಿಯಾಮ್‌ ಆಲ್ಡರ್‌ 17 ಹಾಗೂ ಅಫಿವೆ ಮ್ನ್ಯಾಂಡಾ 5 ರನ್‌ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.

ಆಫ್ರಿಕಾ 45.4 ಓವರ್​ನಲ್ಲಿ 187 ರನ್​ಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು. ಟೀಮ್ ಇಂಡಿಯಾ ಪರ ವಿಕ್ಕಿ ಒಸ್ತ್​ವಲ್ 5 ವಿಕೆಟ್‌ ಪಡೆದು ಮಿಂಚಿದರೆ, ರಾಜ್‌ ಬಾವಾ 4 ವಿಕೆಟ್‌ ಕಬಳಿಸಿದರು. ವಿಕ್ಕಿ ಒಸ್ತ್​ವಲ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. 45 ರನ್​ಗಳ ಜಯದೊಂದಿಗೆ ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ಶುಭಾರಂಭ ಮಾಡಿದೆ. ಭಾರತ ಅಂಡರ್-19 ತಂಡ ತನ್ನ ಮುಂದಿನ ಪಂದ್ಯವನ್ನು ಜನವರಿ 19 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.

Virat Kohli: ವಿರಾಟ್ ಕೊಹ್ಲಿ ರಾಜೀನಾಮೆ: ಹಿಂದಿನ ತಪ್ಪುಗಳಿಂದ ಪಾಠ ಕಲಿತ ಬಿಸಿಸಿಐ