SL vs IND 3rd ODI: ಶ್ರೀಲಂಕಾ ಸ್ಪಿನ್ ಮೋಡಿ: ಸಾಧಾರಣ ಸವಾಲು ನೀಡಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Jul 23, 2021 | 8:33 PM

India vs Sri Lanka 3rd ODI : ಇನ್ನು ಪದಾರ್ಪಣೆ ಪಂದ್ಯದಲ್ಲಿ ಮಿಂಚುವಲ್ಲಿ ನಿತೀಶ್ ರಾಣಾ ಹಾಗೂ ಕೃಷ್ಣಪ್ಪ ಗೌತಮ್ ವಿಫಲರಾದರು. ರಾಣಾ 7 ರನ್​ಗಳಿಸಿದರೆ, ಕೆ ಗೌತಮ್ 2 ರನ್​ಗಳಿಸಿ ಧನಂಜಯಗೆ ವಿಕೆಟ್ ಒಪ್ಪಿಸಿದರು.

SL vs IND 3rd ODI: ಶ್ರೀಲಂಕಾ ಸ್ಪಿನ್ ಮೋಡಿ: ಸಾಧಾರಣ ಸವಾಲು ನೀಡಿದ ಟೀಮ್ ಇಂಡಿಯಾ
ಶ್ರೀಲಂಕಾ ತಂಡ
Follow us on

ಕೊಲಂಬೊದ ಆರ್​ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾಗೆ 226 ರನ್​ಗಳ ಸಾಧಾರಣ ಸವಾಲು ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ದೊರೆತಿರಲಿಲ್ಲ. ನಾಯಕ ಶಿಖರ್ ಧವನ್ ಕೇವಲ 13 ರನ್​ಗಳಿಸಿ ಮೊದಲಿಗರಾಗಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಪೃಥ್ವಿ ಶಾ ಹಾಗೂ ಸಂಜು ಸ್ಯಾಮ್ಸನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ಅದರಂತೆ ಲಂಕಾ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಪೃಥ್ವಿ 48 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 49 ರನ್ ಬಾರಿಸಿದರು. ಈ ಹಂತದಲ್ಲಿ ಶನಕ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪೃಥ್ವಿ ಎಲ್​ಬಿಡಬ್ಲ್ಯೂ ಆಗಿ ಅರ್ಧಶತಕದಿಂದ ವಂಚಿತರಾದರು. ಇನ್ನು ಮತ್ತೊಂದೆಡೆ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟದೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಿದರು.

ಈ ವೇಳೆ ಜೊತೆಯಾದ ಸ್ಯಾಮ್ಸನ್-ಮನೀಶ್ ಪಾಂಡೆ ಉತ್ತಮ ಜೊತೆಯಾಟವಾಡಿದರು. ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದ ಈ ಜೋಡಿ ತಂಡದ ಮೊತ್ತವನ್ನು100ರ ಗಡಿ ದಾಟಿಸಿದರು. ಇದೇ ವೇಳೆ ಅರ್ಧಶತಕದ ತಲುಪಿದ್ದ ಸ್ಯಾಮ್ಸನ್ (46) ಜಯವಿಕ್ರಮ ಎಸೆತದಲ್ಲಿ ಅವಿಷ್ಕಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದರಿಂದ ಕೆಲ ಹೊತ್ತಿನವರೆಗೆ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಮೂರು ಓವರ್​ಗಳ ಕಡಿತದೊಂದಿಗೆ ಪಂದ್ಯವನ್ನು ಪುನರಾರಂಭಿಸಲಾಗಿಯಿತು.

ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕನ್ನಡಿಗ ಮನೀಶ್ ಪಾಂಡೆ ಕೇವಲ 11 ರನ್​ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಮ್ಮ ಫಾರ್ಮ್​ ಪ್ರದರ್ಶಿಸಿದರು. ಅದರಂತೆ 37 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 40 ರನ್ ಬಾರಿಸಿದರು. ಇದೇ ವೇಳೆ ದಾಳಿಗಿಳಿದ ಧನಂಜಯ ಸೂರ್ಯಕುಮಾರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (19) ಕೂಡ ಜಯವಿಕ್ರಮನ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು.

ಇನ್ನು ಪದಾರ್ಪಣೆ ಪಂದ್ಯದಲ್ಲಿ ಮಿಂಚುವಲ್ಲಿ ನಿತೀಶ್ ರಾಣಾ ಹಾಗೂ ಕೃಷ್ಣಪ್ಪ ಗೌತಮ್ ವಿಫಲರಾದರು. ರಾಣಾ 7 ರನ್​ಗಳಿಸಿದರೆ, ಕೆ ಗೌತಮ್ 2 ರನ್​ಗಳಿಸಿ ಧನಂಜಯಗೆ ವಿಕೆಟ್ ಒಪ್ಪಿಸಿದರು. ಇನ್ನು ರಾಹುಲ್ ಚಹರ್ (13) ಹಾಗೂ ನವದೀಪ್ ಸೈನಿ (15) ಒಂದಷ್ಟು ಪ್ರತಿರೋಧ ತೋರಿದರೂ ಲಂಕಾ ಬೌಲರುಗಳ ಪರಾಕ್ರಮದ ಮುಂದೆ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ 43.1 ಓವರ್​ನಲ್ಲಿ 225 ರನ್​ಗಳಿಗೆ ಸರ್ವಪತನ ಕಂಡಿತು. ಶ್ರೀಲಂಕಾ ಪರ ಅಕಿಲ ಧನಂಜಯ ಹಾಗೂ ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಚಮೀರ 2 ವಿಕೆಟ್ ಉರುಳಿಸಿದರು.

ಉಭಯ ತಂಡಗಳು ಹೀಗಿವೆ (India vs Sri Lanka 3rd ODI Playing 11):-

ಶ್ರೀಲಂಕಾ (Sri Lanka Playing 11): ಶ್ರೀಲಂಕಾ (ಇಲೆವೆನ್ ಪ್ಲೇಯಿಂಗ್): ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ನಾಯಕ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ದಾನಂಜಯ, ಜಯವಿಕ್ರಮ

ಭಾರತ (Team India Playing 11): ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

 

ಇದನ್ನೂ ಓದಿ: The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!

Published On - 8:31 pm, Fri, 23 July 21