Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

| Updated By: ಝಾಹಿರ್ ಯೂಸುಫ್

Updated on: Jul 22, 2021 | 2:14 PM

ಲಂಕಾ ವಿರುದ್ದ ಭಾರತ 7 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾಗ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಬದಲಾವಣೆ ಮಾಡಿದ್ದರು. ಭುವಿ ಬದಲಿಗೆ ದೀಪಕ್ ಚಹರ್ ಅವರನ್ನು ಬ್ಯಾಟಿಂಗ್​ಗೆ ಇಳಿಸಿದ್ದರು.

Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
Rahul Dravid
Follow us on

ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಲಂಕಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಯುವ ಪಡೆ ಸರಣಿ ಜಯಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ. ಅದರಲ್ಲೂ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಿಸಿರುವ ಪರಿಗೆ ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಶ್ರೀಲಂಕಾ ನೀಡಿದ 276 ರನ್‍ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡವು ಒಂದು ಹಂತದಲ್ಲಿ 193 ರನ್‍ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಎಚ್ಚರಿಕೆಯ ಆಟದೊಂದಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂದರೆ 8 ವಿಕೆಟ್​ಗೆ ಚಹರ್-ಭುವಿ ಜೋಡಿ ಬರೋಬ್ಬರಿ 84 ರನ್​ಗಳನ್ನು ಕಲೆಹಾಕಿದ್ದರು.

ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ 8ನೇ ಕ್ರಮಾಂಕದಲ್ಲಿ ದೀಪಕ್ ಚಹರ್ ಕಣಕ್ಕಿಳಿದಿರುವುದು. ಸಾಮಾನ್ಯವಾಗಿ ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ 8ನೇ ಕ್ರಮಾಂಕದಲ್ಲಿ ಆಡುತ್ತಾರೆ. ಆದರೆ ಲಂಕಾ ವಿರುದ್ದ ಭಾರತ 7 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾಗ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಬದಲಾವಣೆ ಮಾಡಿದ್ದರು. ಭುವಿ ಬದಲಿಗೆ ದೀಪಕ್ ಚಹರ್ ಅವರನ್ನು ಬ್ಯಾಟಿಂಗ್​ಗೆ ಇಳಿಸಿದ್ದರು.

ಕ್ರೀಸ್​ಗೆ ಇಳಿಯುವ ಮುನ್ನ ಡ್ರೆಸಿಂಗ್ ರೂಮ್​ನಲ್ಲಿ ದೀಪಕ್ ಚಹರ್ ಜೊತೆ ಮಾತನಾಡಿದ್ದ ದ್ರಾವಿಡ್, ಎಲ್ಲಾ ಬಾಲ್​ಗಳನ್ನು ಆಡಲು ತಿಳಿಸಿದ್ದರು. ಅಷ್ಟೇ ಅಲ್ಲದೆ ದ್ರಾವಿಡ್ ಕೋಚಿಂಗ್​ನಲ್ಲಿ ನಾನು ಭಾರತ ಎ ತಂಡದ ಪರ ಕೂಡ ಆಡಿದ್ದೇನೆ. ಅವರು ನನ್ನ ಬ್ಯಾಟಿಂಗ್ ಮೇಲೆ ಹೆಚ್ಚು ವಿಶ್ವಾಸ ಹೊಂದಿದ್ದರು. ಹೀಗಾಗಿಯೇ 50 ಓವರ್​ಗಳನ್ನು ಆಡುವಂತೆ ತಿಳಿಸಿದ್ದರು. ಅದರಂತೆ ಅಂತಿಮ ಎಸೆತದವರೆಗೂ ಕ್ರೀಸ್ ಕಚ್ಚಿ ನಿಲ್ಲುವುದು ನಮ್ಮ ಯೋಜನೆಯಾಗಿತ್ತು ಎಂದು ಚಹರ್ ಬಹಿರಂಗಪಡಿಸಿದ್ದಾರೆ.

ರಾಹುಲ್ ದ್ರಾವಿಡ್ ಅವರ ಸೂಚನೆಯಂತೆ ಬ್ಯಾಟಿಂಗ್ ಮಾಡಿದ ದೀಪಕ್ ಚಹರ್ ತಂಡದ ಸರಾಸರಿ 6ಕ್ಕಿಂತ ಕಡಿಮೆ ಕುಸಿಯದಂತೆ ನೋಡಿಕೊಂಡರು. ಸಿಕ್ಕ ಅವಕಾಶದಲ್ಲಿ ಆಕ್ರಮಣಕಾರಿ ಹೊಡೆತವನ್ನು ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇತ್ತ ಅನುಭವದೊಂದಿಗೆ ಸಾಥ್ ನೀಡಿದ ಭುವನೇಶ್ವರ್ ಕುಮಾರ್ 28 ಎಸೆತಗಳಲ್ಲಿ 19 ರನ್ ಬಾರಿಸಿದರು. ದಿ ಲೆಜೆಂಡ್ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿದ ಆ ಒಂದು ಬದಲಾವಣೆ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಅದರಂತೆ ಟೀಮ್ ಇಂಡಿಯಾ 49.1 ಓವರ್​ನಲ್ಲಿ 277 ರನ್​ ಬಾರಿಸುವ ಮೂಲಕ 3 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಬೌಲಿಂಗ್​ನಲ್ಲಿ 2 ವಿಕೆಟ್ ಕಬಳಿಸಿ, ಹಾಗೂ ಬ್ಯಾಟಿಂಗ್​ನಲ್ಲಿ 1 ಸಿಕ್ಸ್ ಹಾಗೂ 7 ಬೌಂಡರಿ ನೆರವಿನಿಂದ 69 ರನ್ ಗಳಿಸಿದ್ದ ದೀಪಕ್ ಚಹರ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

 

ಇದನ್ನೂ ಓದಿ: IND vs SL: ಆಸ್ಟ್ರೇಲಿಯಾದ ವಿಶ್ವದಾಖಲೆಯನ್ನು ಪುಡಿಪುಡಿ ಮಾಡಿದ ಟೀಮ್ ಇಂಡಿಯಾ: ಧವನ್ ಪಡೆಯಿಂದ ಹೊಸ ಸಾಧನೆ

 

ಇದನ್ನೂ ಓದಿ: Virat Kohli: ವಾವ್: ವಿರಾಟ್ ಕೊಹ್ಲಿಯಿಂದ ನೆಟ್​ನಲ್ಲಿ ಮನಮೋಹಕ ಹೊಡೆತ: ಭರ್ಜರಿ ಅಭ್ಯಾಸ

 

(India vs Sri lanka: Deepak Chahar reveals what Rahul Dravid told him)