
ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಕೂಡ ಮುಗಿಸಿದೆ. 4ನೇ ದಿನದಾಟದಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೇವಲ 2 ಸೆಷನ್ಗಳನ್ನು ಆಡಲಷ್ಟೇ ಶಕ್ತವಾಯಿತು. 4ನೇ ದಿನದಾಟದ ಎರಡನೇ ಸೆಷನ್ ಮುಗಿಯುವುದಕ್ಕೂ ಮುನ್ನವೇ ಟೀಂ ಇಂಡಿಯಾ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ ಆತಿಥೇಯ ಶ್ರೀಲಂಕಾ ತಂಡಕ್ಕೆ 372 ರನ್‌ಗಳ ಕಠಿಣ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ (Rishabh Pant) 66 ರನ್, ದೇವದತ್ ಪಡಿಕ್ಕಲ್ 44 ರನ್ ಮತ್ತು ಕೆಎಲ್ ರಾಹುಲ್ 35 ರನ್ ಬಾರಿಸಿದ್ದನ್ನು ಬಿಟ್ಟರೆ ಉಳಿದವರಿಗೆ ಒಂದಂಕಿ ಮೊತ್ತವನ್ನು ದಾಟಲು ಸಾಧ್ಯವಾಗಲಿಲ್ಲ.
ಮೂರನೇ ದಿನದಾಟದ ಕೊನೆಯ ಸೆಷನ್ನಲ್ಲಿ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ 284 ರನ್‌ಗಳಿಗೆ ಆಲೌಟ್ ಮಾಡಿತು. ಮಂದ ಬೆಳಕಿನಿಂದಾಗಿ ಮೂರನೇ ದಿನದಂದು ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾಲ್ಕನೇ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಜೈಸ್ವಾಲ್ ಖಾತೆ ತೆರೆಯದೆ ಔಟಾದರು. ಆದರೆ ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಪಡಿಕ್ಕಲ್ ಎರಡನೇ ವಿಕೆಟ್ಗೆ 65 ರನ್‌ಗಳ ಜೊತೆಯಾಟ ನೀಡಿದರು. 35 ರನ್‌ಗಳಿಗೆ ರಾಹುಲ್ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.
ರಾಹುಲ್ ವಿಕೆಟ್ ಪತನದ ಬಳಿಕ ಬಂದ ನಾಯಕ ಶುಭ್ಮನ್ ಗಿಲ್ ಕೇವಲ 8 ರನ್‌ಗಳಿಗೆ ಔಟಾದರೆ, ದೇವದತ್ ಪಡಿಕ್ಕಲ್ 44 ರನ್‌ಗಳಿಗೆ ಔಟಾಗುವ ಮೂಲಕ ಅರ್ಧಶತಕ ವಂಚಿತರಾದರು. ಪಡಿಕ್ಕಲ್ ವಿಕೆಟ್ ಬಳಿಕ ತಂಡ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಆದರೆ ಪಂತ್ಗೆ ಬೇರೆ ಬ್ಯಾಟರ್ಗಳಿಂದ ಬೆಂಬಲ ಸಿಗಲಿಲ್ಲ. ಪಂತ್ ಹೊರತುಪಡಿಸಿ ಉಳಿದ ಯಾವುದೇ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 10 ರನ್‌ಗಳ ಗಡಿ ದಾಟಲಿಲ್ಲ. ಹೀಗಾಗಿ 111 ರನ್‌ಗಳಿಗೆ ತನ್ನ 4 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 193 ರನ್ಗಳೊಳಗೆ ಉಳಿದ 6 ವಿಕೆಟ್‌ಗಳನ್ನು ಕಳೆದುಕೊಂಡಿತು.
IND vs SL: 3ನೇ ದಿನವೂ ಮಳೆ..! ಮೊದಲ ಟೆಸ್ಟ್ ರದ್ದಾದರೆ ಟೀಂ ಇಂಡಿಯಾಕ್ಕೆ ಭಾರಿ ನಷ್ಟ
ರಿಷಭ್ ಪಂತ್ 69 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದಾಗ ತಂಡದ ಮೊತ್ತ 174 ರನ್ ಆಗಿತ್ತು. ಆ ಹಂತದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಪಂತ್ ವಿಕೆಟ್ ಬಳಿಕ ಉಳಿದ 4 ವಿಕೆಟ್ಗಳು 19 ರನ್‌ಗಳಿಗೆ ಪತನಗೊಂಡವು. ಇದರಿಂದಾಗಿ ಟೀಂ ಇಂಡಿಯಾಕ್ಕೆ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇತ್ತ ಶ್ರೀಲಂಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ, ಅಸಿತಾ ಫೆರ್ನಾಂಡೊ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಪ್ರಭಾತ್ ಜಯಸೂರ್ಯ ಮೂರು ವಿಕೆಟ್‌ಗಳನ್ನು ಪಡೆದರು. ಲಹಿರು ಕುಮಾರ ಎರಡು ಮತ್ತು ಕುಶಾರ ನುವಂತ ಒಂದು ವಿಕೆಟ್ ಪಡೆದರು.
Published On - 2:36 pm, Tue, 18 August 26