ಶ್ರೀಲಂಕಾ ವಿರುದ್ಧದ ಅಂತಿಮ ಟಿ-ಟ್ವೆಂಟಿ ಪಂದ್ಯವನ್ನು ಗೆಲ್ಲುವ ಮೂಲಕ, ಟೀಂ ಇಂಡಿಯಾ (Team India) ಐತಿಹಾಸಿಕ ಸಾಧನೆ ಮಾಡಿದೆ. ಇದುವರೆಗೂ ಟಿಟ್ವೆಂಟಿ ಕ್ರಿಕೆಟ್ನಲ್ಲಿ, ವಿಶ್ವದ ಯಾವ ತಂಡವೂ ಮಾಡದಿರುವ ಅದ್ವಿತೀಯ ಸಾಧನೆ ಮಾಡಿದೆ. ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯವನ್ನೂ ಗೆಲ್ಲುವ ಮೂಲಕ ಟೀಂ ಇಂಡಿಯಾ, ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಮೂಲಕ ಟೀಂ ಇಂಡಿಯಾ ಸತತ 3 ಸರಣಿಗಳನ್ನ ಕ್ಲೀನ್ ಸ್ವೀಪ್ ಮಾಡಿದ ವಿಶ್ವ ದಾಖಲೆ ಬರೆದಿದೆ. 2021ರ ನವೆಂಬರ್‌ನಲ್ಲಿ ರೋಹಿತ್ (Rohit Sharma) ಪಡೆ, ನ್ಯೂಜಿಲೆಂಡ್ ವಿರುದ್ಧದ ಟಿಟ್ವೆಂಟಿ ಸರಣಿ.. ಬಳಿಕ ಇದೇ ತಿಂಗಳಲ್ಲಿ ನಡೆದ ವಿಂಡೀಸ್ ವಿರುದ್ಧದ ಟಿಟ್ವೆಂಟಿ ಸರಣಿ.. ಇದೀಗ ಶ್ರೀಲಂಕಾ ವಿರುದ್ಧದ ಟಿಟ್ವೆಂಟಿ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಟೆಸ್ಟ್ ಆಡುವ 3 ರಾಷ್ಟ್ರಗಳ ಮೇಲೆ ಸತತ 3ನೇ ಸರಣಿ ಕ್ಲೀನ್ಸ್ವೀಪ್!
ಇದುವರೆಗೂ ಟಿಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವು ಟೆಸ್ಟ್ ಆಡುವ ಮೂರು ರಾಷ್ಟ್ರಗಳನ್ನ ಸತತವಾಗಿ ಕ್ಲೀನ್ ಸ್ವೀಪ್ ಮಾಡಿರಲಿಲ್ಲ. ಆದ್ರೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಸಾಧನೆ ಮಾಡಿದೆ. ಟೆಸ್ಟ್ ಆಡುವ ರಾಷ್ಟ್ರಗಳಾದ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಟಿಟ್ವೆಂಟಿ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿ ವಿಶ್ವ ದಾಖಲೆ ಬರೆದಿದೆ.
ಅಫ್ಘಾನಿಸ್ತಾನ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ!
ಅಫ್ಘಾನಿಸ್ತಾನ ತಂಡ ಕ್ರಿಕೆಟ್ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ರೂ, ಟಿಟ್ವೆಂಟಿ ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆದುಕೊಂಡಿದೆ. ಟಿಟ್ವೆಂಟಿ ಕ್ರಿಕೆಟ್ನಲ್ಲಿ ಸತತ 12 ಪಂದ್ಯಗಳನ್ನ ಗೆದ್ದ ಶ್ರೇಷ್ಠ ಸಾಧನೆ, ಅಫ್ಘಾನಿಸ್ತಾನದ ಹೆಸರಿನಲ್ಲಿತ್ತು. ಆದ್ರೀಗ ಟೀಂ ಇಂಡಿಯಾ ಕೂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಸತತ 12 ಟಿ20 ಪಂದ್ಯಗಳನ್ನ ಗೆದ್ದು, ಅಫ್ಘಾನಿಸ್ತಾನದ ದಾಖಲೆಯನ್ನ ಸರಿಗಟ್ಟಿದೆ.
ಕೊಹ್ಲಿ, ಮಾರ್ಗನ್ ದಾಖಲೆ ಪುಡಿಗಟ್ಟಿದ ರೋಹಿತ್!
ನಾಯಕನಾಗಿ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ತವರಿನಲ್ಲಿ ಅತೀ ಹೆಚ್ಚು ಟಿಟ್ವೆಂಟಿ ಪಂದ್ಯಗಳನ್ನ ಗೆದ್ದ ವಿಶ್ವದ ಮೊದಲ ನಾಯಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ದಾಖಲೆಯನ್ನ ಪುಡಿಗಟ್ಟಿದ್ದಾರೆ.
ತವರಿನಲ್ಲಿ ಹೆಚ್ಚು ಪಂದ್ಯ ಗೆದ್ದ ನಾಯಕರು
ರೋಹಿತ್ ಶರ್ಮಾ ಟಿಟ್ವೆಂಟಿ ಕ್ರಿಕೆಟ್ನಲ್ಲಿ ತವರಿನಲ್ಲಿ 17 ಪಂದ್ಯಗಳನ್ನ ಗೆಲ್ಲಿಸಿಕೊಟ್ಟು ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಲಾ 15 ಪಂದ್ಯಗಳನ್ನ ಗೆಲ್ಲಿಸಿಕೊಡುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 13 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ರೆ, ಮಹೇಂದ್ರ ಸಿಂಗ್ ಧೋನಿ 11 ಪಂದ್ಯಗಳಲ್ಲಿ ಜಯ ದೊರಕಿಸಿಕೊಟ್ಟಿದ್ದಾರೆ.
ಮಲಿಕ್ ದಾಖಲೆ ಅಳಿಸಿ ನೂತನ ದಾಖಲೆ ಬರೆದ ರೋಹಿತ್!
ಇವೆಲ್ಲದರ ಜೊತೆಯಲ್ಲೇ ರೋಹಿತ್ ಶರ್ಮಾ, ಟಿಟ್ವೆಂಟಿ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧದ 3ನೇ ಟಿಟ್ವೆಂಟಿ ಪಂದ್ಯ ರೋಹಿತ್ ಶರ್ಮಾ ಪಾಲಿಗೆ 125ನೇ ಅಂತರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಶೋಯೆಬ್ ಮಲಿಕ್ ಹೆಸರಿನಲ್ಲಿತ್ತು. ಮಲಿಕ್ ಪಾಕ್ ಪರ 124 ಅಂತರಾಷ್ಟ್ರೀಯ ಟಿಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ.
ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾಗಿ ರೋಹಿತ್ ಶರ್ಮಾ, ಪ್ರತಿ ಸರಣಿಯಲ್ಲೂ ದಾಖಲೆವೀರನಾಗಿ ಹೊರ ಹೊಮ್ಮುತ್ತಿದ್ದಾರೆ. ಟಿಟ್ವೆಂಟಿ ಕ್ರಿಕೆಟ್ನಲ್ಲಿ ಧೋನಿ, ಕೊಹ್ಲಿ ಮಾಡದ ಸಾಧನೆಯನ್ನ ಮಾಡುತ್ತಿದ್ದಾರೆ. ಆದ್ರೆ ರೋಹಿತ್ ಮುಂಬರುವ ಟಿಟ್ವೆಂಟಿ ವಿಶ್ವಕಪ್ ಗೆದ್ರೆ ಮಾತ್ರ, ಧೋನಿ ಸಾಲಿನಲ್ಲಿ ನಿಲ್ಲೋಕೆ ಸಾದ್ಯ.. ಇಲ್ಲಾ ಅಂದ್ರೆ ಎಷ್ಟೇ ಅಬ್ಬರಿಸಿ ಬೊಬ್ಬರಿದ್ರೂ ಕೊಹ್ಲಿ ಪಕ್ಕದಲ್ಲಿ ನಗಬೇಕಾಗುತ್ತೆ.
ಇದನ್ನೂ ಓದಿ:IND vs SL: ಮೊಹಾಲಿ ಟೆಸ್ಟ್ ಕೊಹ್ಲಿಗಷ್ಟೇ ವಿಶೇಷವಲ್ಲ! ಶ್ರೀಲಂಕಾಗೂ ಅವಿಸ್ಮರಣೀಯ ಪಂದ್ಯವಾಗಲಿದೆ