ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಜನವರಿ 12 ಗುರುವಾರ ಅಂದರೆ ಇಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಈಡನ್ ಗಾರ್ಡನ್‌ನಲ್ಲಿ (Eden Gardens) ವಿರಾಟ್ ಕೊಹ್ಲಿಗೆ ಕೆಲವು ವಿಶೇಷ ಮೈಲಿಗಲ್ಲುಗಳನ್ನು ಸಾಧಿಸುವ ಅವಕಾಶವಾಗಿದೆ. ಗುವಾಹಟಿಯಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಶತಕ ಸಿಡಿಸಿದ್ದರು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧವೂ ಶತಕ ಬಾರಿಸಿದ್ದ ವಿರಾಟ್ ಈಗ ವಿಶ್ವದ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಟಾಪ್ 5 ಪಟ್ಟಿಗೆ ಸೇರ್ಪಡೆಗೊಳ್ಳುವ ಅವಕಾಶ ಹೊಂದಿದ್ದಾರೆ. ಅಲ್ಲದೆ ಕೊಹ್ಲಿ ತಮ್ಮ ಎರಡನೇ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತವರಿನಲ್ಲಿ 20 ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಗುವಾಹಟಿಯಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದೀಗ ಈ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೆ ಆ ದಾಖಲೆ ಕೊಹ್ಲಿ ಹೆಸರಿನಲ್ಲಿ ದಾಖಲಾಗಲಿದೆ. ಸಚಿನ್ ತವರಿನಲ್ಲಿ 160 ಪಂದ್ಯಗಳಲ್ಲಿ 20 ಶತಕ ಬಾರಿಸಿದರೆ, ಕೊಹ್ಲಿ ಕೇವಲ 101 ಪಂದ್ಯಗಳಲ್ಲಿ ಅದೇ ಸಂಖ್ಯೆಯ ಶತಕ ಸಿಡಿಸಿದ್ದಾರೆ. ಇದೀಗ ಶತಕ ಸೇರಿಸುವ ಮೂಲಕ ಸಚಿನ್ ಅವರನ್ನು ಹಿಂದಿಕ್ಕಲಿದ್ದಾರೆ.
IND vs SL: ಕೊಹ್ಲಿ ಶತಕದ ಬಳಿಕ ಕ್ರೀಡಾಂಗಣ ಭರ್ತಿ! ಎರಡನೇ ಏಕದಿನ ಪಂದ್ಯದ ಟಿಕೆಟ್ಗೆ ಭಾರಿ ಬೇಡಿಕೆ
ವಿರಾಟ್ ಕೊಹ್ಲಿಯನ್ನು ರನ್ ಮೆಷಿನ್ ಎಂದು ಕರೆಯಲಾಗುತ್ತದೆ. ಈ ರನ್ ಯಂತ್ರದ ಬ್ಯಾಟ್‌ನಿಂದ ಇಲ್ಲಿಯವರೆಗೆ ಸಾಕಷ್ಟು ರನ್‌ಗಳು ಹೊರಬಂದಿವೆ. ಹೀಗಾಗಿ ಇದೀಗ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ತಲುಪುವ ಸನಿಹದಲ್ಲಿದ್ದಾರೆ. ಕೊಹ್ಲಿ 266 ಪಂದ್ಯಗಳಲ್ಲಿ 12584 ರನ್ ಗಳಿಸಿದ್ದು, ಟಾಪ್ 5 ಪಟ್ಟಿಗೆ ಸೇರಲು ಅವರಿಗೆ ಕೇವಲ 67 ರನ್‌ಗಳ ಅಂತರವಿದೆ. ಇದರೊಂದಿಗೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆಯನ್ನು ಹಿಂದಿಕ್ಕಿ ಈ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರನಾಗಿ ಕೊಹ್ಲಿ ಹೊರಹೊಮ್ಮಲಿದ್ದಾರೆ. ಮಹೇಲಾ ಜಯವರ್ಧನೆ ಏಕದಿನ ಕ್ರಿಕೆಟ್‌ನಲ್ಲಿ 12650 ರನ್ ಗಳಿಸಿ ಟಾಪ್ 5 ಬ್ಯಾಟ್ಸ್‌ಮನ್ ಆಗಿದ್ದಾರೆ.
ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಅವರು ಏಕದಿನ ಮಾದರಿಯಲ್ಲಿ 18426 ರನ್ ಬಾರಿಸಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ 14234 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 13430 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ 13430 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಎರಡನೇ ಏಕದಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಇಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಇದೇ ಮೈದಾನದಲ್ಲಿ 332 ರನ್ ಗಳಿಸಿದ್ದು, ಇದು ಈಡನ್ ಗಾರ್ಡನ್ಸ್‌ನಲ್ಲಿ ಎರಡನೇ ಗರಿಷ್ಠ ರನ್ ಆಗಿದೆ. ಈ ದಾಖಲೆ ಮುರಿಯಲು ಕೊಹ್ಲಿಗೆ ಬೇಕಿರುವುದು 7 ರನ್ ಮಾತ್ರ. ಈ ದಾಖಲೆಯಲ್ಲೂ ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದು ಅವರು ಈ ಮೈದಾನದಲ್ಲಿ 496 ರನ್‌ಗಳನ್ನು ಬಾರಿಸಿದ್ದಾರೆ. ಇಲ್ಲಿ ಸಚಿನ್ ಮತ್ತು ಕೊಹ್ಲಿ ನಡುವೆ 170 ರನ್‌ಗಳ ಅಂತರವಿದೆ. ಈ ಮೈದಾನದಲ್ಲಿ ಕೊಹ್ಲಿ 6 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 54.33 ಸರಾಸರಿಯಲ್ಲಿ 326 ರನ್ ಗಳಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡುವ ಹೊಸ್ತಿಲಿನಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಅಗ್ರ ಐದು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನಕ್ಕೇರಲು ಕೊಹ್ಲಿ 131 ರನ್ ಗಳಿಸಬೇಕಾಗಿದೆ. ಪ್ರಸ್ತುತ 11 ಪಂದ್ಯಗಳಿಂದ 1085 ರನ್ ಗಳಿಸಿ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ ಶ್ರೀಲಂಕಾ ವಿರುದ್ಧವೂ ಅಷ್ಟೇ ರನ್ ಗಳಿಸಿದ್ದು, ಅಜರ್ ಶ್ರೀಲಂಕಾ ವಿರುದ್ಧ 1215 ಏಕದಿನ ರನ್ ಗಳಿಸಿದ್ದಾರೆ.
ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಲಂಕಾ ವಿರುದ್ಧ ಅವರು 1995 ರನ್ ಬಾರಿಸಿದ್ದಾರೆ. ರಾಹುಲ್ ದ್ರಾವಿಡ್ 1508 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ವೀರೇಂದ್ರ ಸೆಹ್ವಾಗ್ 1239 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿ ಅವರು ಮೂರು ಮತ್ತು ನಾಲ್ಕನೇ ಕ್ರಮಾಂಕವನ್ನು ತ್ವರಿತವಾಗಿ ದಾಟಬಹುದಾದರೂ ಸಚಿನ್ ಅವರನ್ನು ಹಿಂದಿಕ್ಕಲು ಇನ್ನೂ ಬಹಳ ದೂರ ಸಾಗಬೇಕಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Thu, 12 January 23