IND vs ZIM: 13 ರನ್​ಗೆ 4 ವಿಕೆಟ್; ರವಿ ಬಿಷ್ಣೋಯ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ; ವಿಡಿಯೋ ನೋಡಿ

|

Updated on: Jul 06, 2024 | 7:00 PM

Ravi Bishnoi: ರವಿ ಬಿಷ್ಣೋಯ್ ಅದ್ಭುತ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದರು. ಅಲ್ಲದೆ 2 ಮೇಡನ್ ಓವರ್ ಬೌಲ್ ಮಾಡಿದರು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಜಿಂಬಾಬ್ವೆ ತಂಡ ಭಾರತಕ್ಕೆ 115 ರನ್​ಗಳ ಅಲ್ಪ ಟಾರ್ಗೆಟ್ ನೀಡಿದೆ.

IND vs ZIM: 13 ರನ್​ಗೆ 4 ವಿಕೆಟ್; ರವಿ ಬಿಷ್ಣೋಯ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ; ವಿಡಿಯೋ ನೋಡಿ
ರವಿ ಬಿಷ್ಣೋಯ್
Follow us on

ಹರಾರೆಯಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿ ಬಿಷ್ಣೋಯ್ ಅವರ ಮಾರಕ ದಾಳಿಯ ಆಧಾರದ ಮೇಲೆ ಆತಿಥೇಯ ಜಿಂಬಾಬ್ವೆ ತಂಡ ಭಾರತಕ್ಕೆ 115 ರನ್​ಗಳ ಅಲ್ಪ ಟಾರ್ಗೆಟ್ ನೀಡಿದೆ. ಆರಂಭದಿಂದಲೂ ಜಿಂಬಾಬ್ವೆ ಬ್ಯಾಟರ್​ಗಳ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ ವೇಗಿಗಳು ನಿಯಮಿತ ಅಂತರದಲ್ಲಿ ವಿಕೆಟ್ ಕಬಳಿಸಿ ಅಲ್ಪ ರನ್​ಗಳಿಗೆ ಆತಿಥೇಯ ತಂಡವನ್ನು ಕಟ್ಟಿಹಾಕಿದ್ದಾರೆ. ಅದರಲ್ಲೂ ತಮ್ಮ ಮಾಂತ್ರಿಕ ಸ್ಪಿನ್ ಮೋಡಿಯಿಂದ ರವಿ ಬಿಷ್ಣೋಯ್ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು.

4 ಓವರ್‌ಗಳಲ್ಲಿ 4 ವಿಕೆಟ್

ರವಿ ಬಿಷ್ಣೋಯ್ ಅದ್ಭುತ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದರು. ಅಲ್ಲದೆ 2 ಮೇಡನ್ ಓವರ್ ಬೌಲ್ ಮಾಡಿದರು. ಆರನೇ ಓವರ್‌ನ ಮೊದಲ ಎಸೆತದಲ್ಲಿ ಬ್ರಿಯಾನ್ ಬೆನೆಟ್ ಅವರನ್ನು ಬೌಲ್ಡ್ ಮಾಡುವ ಮೂಲಕ ರವಿ ತಮ್ಮ ವಿಕೆಟ್​ಗಳ ಬೇಟೆಯನ್ನು ಆರಂಭಿಸಿದರು.

16ನೇ ಓವರ್‌ನಲ್ಲಿ 2 ವಿಕೆಟ್

ಇದಾದ ಬಳಿಕ ರವಿ ಎಂಟನೇ ಓವರ್​ನಲ್ಲಿ ಅದ್ಭುತ ಬೌಲಿಂಗ್ ಮಾಡಿ ವೆಸ್ಲಿ ಮಾಧೆವೆರೆ ಅವರನ್ನು ಔಟ್ ಮಾಡಿದರು. ಆರಂಭಿಕ ಆಟಗಾರ ಮಾಧೆವೆರೆ 21 ಎಸೆತಗಳಲ್ಲಿ 21 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ರವಿ ಅವರ ಐದನೇ ಎಸೆತದಲ್ಲಿ ವೆಸ್ಲಿ ಸ್ವೀಪ್ ಶಾಟ್ ಹೊಡೆಯಲು ಪ್ರಯತ್ನಿಸಿ ಕ್ಲೀನ್ ಬೌಲ್ಡ್ ಆದರು. ಇದಾದ ಬಳಿಕ 16ನೇ ಓವರ್‌ನಲ್ಲಿ ರವಿ ತಮ್ಮ ಗೂಗ್ಲಿ ಮೂಲಕ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಿದರು. ಅವರು ಮೊದಲ ಎಸೆತದಲ್ಲಿ ಲ್ಯೂಕ್ ಜೊಂಗ್ವೆಯನ್ನು ಬೇಟೆಯಾಡಿದರು.

116 ರನ್ ಟಾರ್ಗೆಟ್

ಎರಡು ಎಸೆತಗಳಲ್ಲಿ 1 ರನ್ ಗಳಿಸಿ ಆಟವಾಡುತ್ತಿದ್ದ ಲ್ಯೂಕ್, ಬಿಷ್ಣೋಯ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಪೆವಿಲಿಯನ್​ಗೆ ಮರಳಿದರು. ರವಿ, ಅದೇ ಓವರ್​ನ ಮೂರನೇ ಎಸೆತದಲ್ಲಿ ಬ್ಲೆಸಿಂಗ್ ಮುಜರಬಾನಿ ಬೌಲ್ಡ್ ಮಾಡಿ ಒಟ್ಟು 4 ವಿಕೆಟ್ ಕಬಳಿಸಿ ತಮ್ಮ ಖೋಟಾ ಮುಗಿಸಿದರು. ರವಿ ಅವರ ಅದ್ಭುತ ಸ್ಪೆಲ್ ನಂತರ, ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಅದ್ಭುತ ಬೌಲಿಂಗ್ ಮಾಡಿದರು. ಸುಂದರ್ 2 ವಿಕೆಟ್ ಹಾಗೂ ಅವೇಶ್ ಒಂದು ವಿಕೆಟ್ ಪಡೆದರು. ಒಟ್ಟಾರೆಯಾಗಿ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್ ಗಳಿಸಲಷ್ಟೇ ಶಕ್ತವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Sat, 6 July 24