IND vs ZIM: 0,7,2,0.. ಭಾರತ ಪೆವಿಲಿಯನ್ ಪರೇಡ್; ಕೇವಲ 22 ರನ್​ಗಳಿಗೆ 4 ವಿಕೆಟ್ ಪತನ

|

Updated on: Jul 06, 2024 | 7:32 PM

IND vs ZIM: ಹರಾರೆಯಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಯುವ ಪಡೆ ಆತಿಥೇಯ ತಂಡದ ಬೌಲಿಂಗ್ ದಾಳಿಗೆ ನಲುಗಿ ಹೋಗಿದೆ. ಜಿಂಬಾಬ್ವೆ ನೀಡಿರುವ 116 ರನ್​ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಕೇವಲ 22 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

IND vs ZIM: 0,7,2,0.. ಭಾರತ ಪೆವಿಲಿಯನ್ ಪರೇಡ್; ಕೇವಲ 22 ರನ್​ಗಳಿಗೆ 4 ವಿಕೆಟ್ ಪತನ
ಟೀಂ ಇಂಡಿಯಾ
Follow us on

ಹರಾರೆಯಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಯುವ ಪಡೆ ಆತಿಥೇಯ ತಂಡದ ಬೌಲಿಂಗ್ ದಾಳಿಗೆ ನಲುಗಿ ಹೋಗಿದೆ. ಜಿಂಬಾಬ್ವೆ ನೀಡಿರುವ 116 ರನ್​ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಕೇವಲ 22 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ತಂಡದ ಇಬ್ಬರು ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವುದು ಜಿಂಬಾಬ್ವೆಯ ಶಿಸ್ತುಬದ್ಧ ದಾಳಿಗೆ ಹಿಡಿದ ಕೈಗನ್ನಡಿಯಾಗಿದೆ. ಉಳಿದಂತೆ ಇನ್ನಿಬ್ಬರು ಬ್ಯಾಟರ್​ಗಳು ಕೇವಲ ಒಂದಂಕಿಗೆ ಸುಸ್ತಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಶೂನ್ಯಕ್ಕೆ ಅಭಿ ಔಟ್

116 ರನ್​​ಗಳ ಗುರಿ ಬೆನ್ನಟ್ಟಿದ ಭಾರತದ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಭಿಷೇಕ್ ಶರ್ಮಾ ಹಾಗೂ ನಾಯಕ ಶುಭ್​ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ವೇಳೆ ಇನ್ನಿಂಗ್ಸ್ ಆರಂಭಿಸಿದ ಅಭೀಷೇಕ್ ಶರ್ಮಾ 4 ಎಸೆತಗಳನ್ನು ಎದುರಿಸಿ ಯಾವುದೇ ರನ್ ಕಲೆಹಾಕದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇದರೊಂದಿಗೆ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಕಳಪೆ ಆರಂಭ ಮಾಡಿದರು. ಆ ನಂತರ ಬಂದ ರುತುರಾಜ್ ಗಾಯಕ್ವಾಡ್ ಕೂಡ 7 ರನ್ ಬಾರಿಸಲಷ್ಟೇ ಶಕ್ತರಾದರು.

22 ರನ್​ಗಳಿಗೆ ಪ್ರಮುಖ 4 ವಿಕೆಟ್

ನಂತರ 4ನೇ ಕ್ರಮಾಂಕದಲ್ಲಿ ಬಂದ ರಿಯಾನ್ ಪರಾಗ್ ಕೂಡ ಹೆಚ್ಚು ಹೊತ್ತು ನಿಲ್ಲದೆ ಬಿಗ್ ಶಾಟ್ ಆಡುವ ಯತ್ನದಲ್ಲಿ 2 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ವಾಸ್ತವವಾಗಿ ರಿಯಾನ್ ಪರಾಗ್​ಗೂ ಇದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸುವ ಅವಕಾಶ ಪಡೆದಿದ್ದ ರಿಯಾನ್ ಬೇಡದ ಶಾಟ್ ಆಡಿ ವಿಕೆಟ್ ಕೈಚೆಲ್ಲಿದರು. ಗೇಮ್ ಫಿನಿಶರ್ ಖ್ಯಾತಿಯ ರಿಂಕು ಸಿಂಗ್ ಕೂಡ ಕಳಪೆ ಶಾಟ್​ಗೆ ಬೆಲೆ ತೆರಬೇಕಾಯಿತು. ಅಚ್ಚರಿಯಿಂದರೆ ವಿಕೆಟ್​ಗಳ ಪತನದ ನಡುವೆ ಜವಬ್ದಾರಿಯುತ ಬ್ಯಾಟಿಂಗ್ ಮಾಡಬೇಕಿದ್ದ ರಿಂಕು ಸಿಕ್ಸರ್ ಬಾರಿಸುವ ಯತ್ನದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಟೀಂ ಇಂಡಿಯಾ ಕೇವಲ 22 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.

ಸೋಲಿನ ಸುಳಿಯಲ್ಲಿ ಭಾರತ

ಈ ಸುದ್ದಿ ಬರೆಯುವ ಹೊತ್ತಿಗೆ ಸೋಲಿನ ದವಡೆಗೆ ಸಿಲುಕಿರುವ ಟೀಂ ಇಂಡಿಯಾ ಕೇವಲ 50 ರನ್​ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡಿದೆ. ಆರಂಭದಿಂದಲೂ ಜವಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ಶುಭ್​ಮನ್ ಗಿಲ್ ಕೂಡ 31 ರನ್​​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ವಿಕೆಟ್ ಕೀಪರ್ ಧೃವ್ ಜುರೇಲ್ ಕೂಡ 6 ರನ್​​​ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಪರ ಬಾಲಂಗೋಚಿಗಳು ಬ್ಯಾಟಿಂಗ್ ಮಾಡುತ್ತಿದ್ದು, ತಂಡಕ್ಕೆ ಸೋಲಿನ ಭಯ ಶುರುವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Sat, 6 July 24