ಬಹುನಿರೀಕ್ಷಿತ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸುವುದು ಸೆಪ್ಟೆಂಬರ್ 2 ರಂದು. ಅದು ಕೂಡ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಎಂಬುದು ವಿಶೇಷ.
ಇದೀಗ ಅದೇ ಪಂದ್ಯವು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ. ಏಕೆಂದರೆ ಈ ಪಂದ್ಯದ ಬಳಿಕ ಏಕದಿನ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ. ಪಾಕಿಸ್ತಾನ್ ವಿರುದ್ಧದ ಪಂದ್ಯವು ಸೆಪ್ಟೆಂಬರ್ 2 ರಂದು ನಡೆದರೆ, ಭಾರತ ಏಕದಿನ ವಿಶ್ವಕಪ್ ತಂಡವನ್ನು ಸೆಪ್ಟೆಂಬರ್ 3 ರಂದು ಘೋಷಿಸಲಿದೆ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ ತಂಡಗಳನ್ನು ಘೋಷಿಸಲು ಈಗಾಗಲೇ ಐಸಿಸಿ ಗಡವು ವಿಧಿಸಿದೆ. ಅದರಂತೆ ಸೆಪ್ಟೆಂಬರ್ 5 ರೊಳಗೆ 10 ತಂಡಗಳನ್ನು ಘೋಷಿಸಬೇಕು. ಅಂದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡದ ಆಯ್ಕೆ ನಡೆಯುವುದು ಖಚಿತ ಎನ್ನಬಹುದು. ಹೀಗಾಗಿಯೇ ಪಾಕ್ ವಿರುದ್ಧದ ಪಂದ್ಯವು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ.
ಒಂದು ವೇಳೆ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿ ಏಷ್ಯಾಕಪ್ನಲ್ಲಿ ಸಂಪೂರ್ಣ ವಿಫಲರಾದರೆ ಮುಂದೇನು? ಎಂಬ ಪ್ರಶ್ನೆಯೊಂದು ಮೂಡುವುದು ಸಹಜ. ಇದಕ್ಕೆ ಉತ್ತರ ತಾತ್ಕಾಲಿಕ ತಂಡದ ಘೋಷಣೆ.
ಅಂದರೆ ಏಕದಿನ ವಿಶ್ವಕಪ್ಗೆ ಸದ್ಯ ತಾತ್ಕಾಲಿಕ ತಂಡವನ್ನು ಘೋಷಿಸಲಾಗುತ್ತದೆ. ಇದಾದ ಬಳಿಕ ಆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕೂ ಕೂಡ ಗಡುವು ವಿಧಿಸಲಾಗಿದ್ದು, ಅದರಂತೆ ಏಕದಿನ ವಿಶ್ವಕಪ್ ಆರಂಭಕ್ಕೂ ಒಂದು ವಾರಗಳ ಮುಂಚಿತವಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
ಹಾಗೆಯೇ ಸೆಪ್ಟೆಂಬರ್ 28 ರ ಬಳಿಕ 15 ಸದಸ್ಯರ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಒಂದು ವೇಳೆ ಗಾಯದ ಸಮಸ್ಯೆ ಅಥವಾ ಇನ್ನಿತರ ಮುಖ್ಯ ಕಾರಣಗಳಿಗಾಗಿ ಬದಲಿ ಆಟಗಾರನನ್ನು ಆಯ್ಕೆ ಮಾಡಬಹುದು. ಆದರೆ ಅದಕ್ಕೂ ಮುನ್ನ ಐಸಿಸಿಯ ಟೆಕ್ನಿಕಲ್ ಕಮಿಟಿಯ ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿಯೇ ಏಷ್ಯಾಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ ಏಕದಿನ ವಿಶ್ವಕಪ್ ತಂಡದಿಂದ ಗೇಟ್ ಪಾಸ್ ಸಿಗಬಹುದು.
ಇದನ್ನೂ ಓದಿ: Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ
ಏಷ್ಯಾಕಪ್ಗಾಗಿ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).