ಭಾರತ ತಂಡದ ಸೆಮಿಫೈನಲ್​ಗೆ ಡೇಟ್ ಫಿಕ್ಸ್: ಎದುರಾಳಿ ಯಾರು?

Champions Trophy 2025: ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ನ್ಯೂಝಿಲೆಂಡ್ ತಂಡ ಗೆಲುವು ದಾಖಲಿಸಿದೆ. ಈ ಫಲಿತಾಂಶದೊಂದಿಗೆ ಗ್ರೂಪ್-ಎ ಪಟ್ಟಿಯಿಂದ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.

ಭಾರತ ತಂಡದ ಸೆಮಿಫೈನಲ್​ಗೆ ಡೇಟ್ ಫಿಕ್ಸ್: ಎದುರಾಳಿ ಯಾರು?
Team India

Updated on: Feb 25, 2025 | 7:59 AM

ಚಾಂಪಿಯನ್ಸ್ ಟ್ರೋಫಿಯು ಟೂರ್ನಿಯು ನಿರ್ಣಾಯಕ ಹಂತದತ್ತ ಸಾಗುತ್ತಿದೆ. 8 ತಂಡಗಳಲ್ಲಿ ಈಗಾಗಲೇ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಹೊರಬಿದ್ದಿದೆ. ಈ ಎರಡು ತಂಡಗಳು ಹೊರಬೀಳುತ್ತಿದ್ದಂತೆ ಭಾರತ ಮತ್ತು ನ್ಯೂಝಿಲೆಂಡ್ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಖಚಿತವಾಗಿದೆ. ಅಂದರೆ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನವೇ ಭಾರತ ತಂಡ ಫಸ್ಟ್ ಸೆಮಿಫೈನಲ್ ಆಡುವುದು ಕನ್ಫರ್ಮ್ ಆದಂತಾಗಿದೆ.

ಏಕೆಂದರೆ ಈ ಬಾರಿಯ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, ಅದರಂತೆ ದುಬೈ ಹಾಗೂ ಪಾಕಿಸ್ತಾನದಲ್ಲಿ ಪಂದ್ಯಾವಳಿ ಜರುಗುತ್ತಿದೆ. ಇತ್ತ ಟೀಮ್ ಇಂಡಿಯಾ ಸೆಮಿಫೈನಲ್​ಗೇರಿದರೆ ಎಲ್ಲಿ ಆಡಿಸಬೇಕೆಂಬುದನ್ನು ಈ ಮೊದಲೇ ನಿರ್ಧರಿಸಲಾಗಿತ್ತು. ಅದರಂತೆ ಮಾರ್ಚ್ 4 ರಂದು ನಡೆಯಲಿರುವ ಮೊದಲ ಪಂದ್ಯಕ್ಕೆ ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂ ಅನ್ನು ಫಿಕ್ಸ್ ಮಾಡಲಾಗಿದೆ.

ಇದೀಗ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಟೀಮ್ ಇಂಡಿಯಾ ಮಾರ್ಚ್ 4 ರಂದು ಸೆಮಿಫೈನಲ್ ಆಡಲಿದೆ. ಅತ್ತ ಮಾರ್ಚ್ 2 ರಂದು ನಡೆಯಲಿರುವ ಕೊನೆಯ ಲೀಗ್​ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಝಿಲೆಂಡ್ ಗೆದ್ದರೂ ಅಥವಾ ಸೋತರೂ ಎರಡನೇ ಸೆಮಿಫೈನಲ್​ನಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯವು ಮಾರ್ಚ್ 5 ರಂದು ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನು ಮಾರ್ಚ್ 9 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಇನ್ನೂ ಸಹ ಸ್ಟೇಡಿಯಂ ನಿಗದಿ ಮಾಡಲಾಗಿಲ್ಲ. ಇಲ್ಲಿ ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶಿಸಿದರೆ, ಅಂತಿಮ ಪಂದ್ಯವು ದುಬೈನ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಒಂದು ವೇಳೆ ಭಾರತ ತಂಡವು ಸೆಮಿಫೈನಲ್​ನಲ್ಲಿ ಸೋತರೆ, ಚಾಂಪಿಯನ್ಸ್ ಟ್ರೋಫಿಯ ಅಂತಿಮ ಹಣಾಹಣಿಯು ಪಾಕಿಸ್ತಾನದ ಲಾಹೋರ್​ನಲ್ಲಿ ನಡೆಯಲಿದೆ. ಹೀಗಾಗಿ ಫೈನಲ್ ಮ್ಯಾಚ್ ನಡೆಯುವ ಸ್ಥಳ ಯಾವುದು ಎಂಬುದು ಗೊತ್ತಾಗಲು ಮಾರ್ಚ್ 4 ರವರೆಗೆ ಕಾಯಲೇಬೇಕು.

ಟೀಮ್ ಇಂಡಿಯಾ ಎದುರಾಳಿ ಯಾರು?

ಭಾರತ ತಂಡವು ಸೆಮಿಫೈನಲ್​ನಲ್ಲಿ ಗ್ರೂಪ್-ಬಿ ನಲ್ಲಿರುವ ತಂಡವೊಂದನ್ನು ಎದುರಿಸಲಿದೆ. ಇಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ್ ತಂಡಗಳಿದ್ದು, ಈ ಟೀಮ್​​ಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯುವ ಎರಡು ತಂಡಗಳು ನಾಕೌಟ್ ಹಂತಕ್ಕೇರಲಿದೆ.

ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!

ಅದರಂತೆ ಟೀಮ್ ಇಂಡಿಯಾದ ಸೆಮಿಫೈನಲ್ ಎದುರಾಳಿಯಾಗಿ ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾ ಅಥವಾ ಇಂಗ್ಲೆಂಡ್ ಅಥವಾ ಅಫ್ಘಾನಿಸ್ತಾನ್ ತಂಡ ಕಾಣಿಸಿಕೊಳ್ಳಬಹುದು. ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದ್ದರೆ ಮಾರ್ಚ್ 1 ರವರೆಗೆ ಕಾಯಲೇಬೇಕು.