41 ರನ್ಗೆ ವಿರಾಟ್ ಕೊಹ್ಲಿ ಔಟ್: ನಿಯಮ ಗೊತ್ತಿಲ್ಲದೇ ಬೆಪ್ಪಾದ ಪಾಕಿಸ್ತಾನ್..!
India vs Pakistan: ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಅಮೋಘ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 111 ಎಸೆತಗಳನ್ನು ಎದುರಿಸಿ ಅಜೇಯ ಶತಕ ಬಾರಿಸಿದ್ದರು. ಈ ಶತಕದ ನೆರವಿನಿಂದ ಭಾರತ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ.

ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ. ಅದು ಸಹ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ. ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ. ಈ ಪಂದ್ಯದಲ್ಲಿ ಪಾಕಿಸ್ತಾನ್ ನೀಡಿದ 241 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದ ನೆರವಿನೊಂದಿಗೆ ಭಾರತ ತಂಡವು 42.3 ಓವರ್ಗಳಲ್ಲಿ 244 ರನ್ ಬಾರಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿತು.
ಒಂದು ವೇಳೆ ವಿರಾಟ್ ಕೊಹ್ಲಿ ಬೇಗನೆ ಔಟ್ ಆಗಿದ್ದರೆ, ಪಾಕಿಸ್ತಾನ್ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶವಿತ್ತು. ಆದರೆ ಅಂತಹದೊಂದು ಅವಕಾಶವನ್ನು ಪಾಕ್ ಆಟಗಾರರೇ ತಪ್ಪಿಸಿಕೊಂಡಿದ್ದಾರೆ ಎಂದರೆ ನಂಬಲೇಬೇಕು.
ಈ ಪಂದ್ಯದ 18ನೇ ಓವರ್ನಲ್ಲಿ ಶುಭ್ಮನ್ ಗಿಲ್ ಔಟಾಗಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಅವಕಾಶ ಪಾಕಿಸ್ತಾನ್ ತಂಡದ ಮುಂದಿತ್ತು. ಏಕೆಂದರೆ ಈ ಪಂದ್ಯದ 21ನೇ ಓವರ್ನ 5ನೇ ಎಸೆತದಲ್ಲಿ ಕಿಂಗ್ ಕೊಹ್ಲಿ ಮಹಾ ಎಡವಟ್ಟು ಮಾಡಿದ್ದರು.
ಹ್ಯಾರಿಸ್ ರೌಫ್ ಎಸೆದ 21ನೇ ಓವರ್ನ 5ನೇ ಎಸೆತವನ್ನು ಕವರ್ ಪಾಯಿಂಟ್ನತ್ತ ಬಾರಿಸಿ ಕೊಹ್ಲಿ ಒಂದು ರನ್ ಓಡಿದ್ದರು. ಹೀಗೆ ನಾನ್ ಸ್ಟ್ರೈಕರ್ನತ್ತ ಓಡಿ ಬಂದ ವಿರಾಟ್ ಕೊಹ್ಲಿಯನ್ನು ರನೌಟ್ ಮಾಡಲು ಪಾಕ್ ಫೀಲ್ಡರ್ ಚೆಂಡನ್ನು ಎಸೆದಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ವಿನಾಕಾರಣ ಕೈಯಿಂದಲೇ ಚೆಂಡನ್ನು ತಡೆದಿದ್ದಾರೆ. ಐಸಿಸಿ ನಿಯಮದ ಪ್ರಕಾರ ಬ್ಯಾಟರ್ ಚೆಂಡನ್ನು ತಡೆದು ಫೀಲ್ಡಿಂಗ್ಗೆ ಅಡ್ಡಿಪಡಿಸುವಂತಿಲ್ಲ.
ವಿರಾಟ್ ಕೊಹ್ಲಿ ಚೆಂಡನ್ನು ತಡೆದ ವಿಡಿಯೋ:
Virat Kohli obstructing field video pic.twitter.com/BzlemeqX5O
— Zsports (@_Zsports) February 25, 2025
ಐಸಿಸಿ ನಿಯಮ 37.4 ರ ಪ್ರಕಾರ, ಚೆಂಡು ಚಲನೆಯಲ್ಲಿರುವಾಗ ಫೀಲ್ಡರ್‌ನ ಒಪ್ಪಿಗೆಯಿಲ್ಲದೆ, ಬ್ಯಾಟ್ ಅಥವಾ ಅವನ/ಅವಳ ದೇಹದ ಯಾವುದೇ ಭಾಗವನ್ನು ಬಳಸಿ ಚೆಂಡನ್ನು ಯಾವುದೇ ಫೀಲ್ಡರ್‌ಗೆ ಹಿಂತಿರುಗಿಸಿದರೆ ಅಥವಾ ಬ್ಯಾಟರ್ ಚೆಂಡನ್ನು ತಡೆದು ಅಡ್ಡಿಪಡಿಸಿದರೆ ಅದನ್ನು ಔಟ್ ಎಂದು ಪರಿಗಣಿಸಲಾಗುತ್ತದೆ.
ಆದರೆ ಈ ನಿಯಮ ಬಗ್ಗೆ ಪಾಕಿಸ್ತಾನ್ ಆಟಗಾರರಿಗೆ ಗೊತ್ತೇ ಇರಲಿಲ್ಲ. ಅಲ್ಲದೆ ಯಾವುದೇ ಆಟಗಾರನು ಈ ಬಗ್ಗೆ ಫೀಲ್ಡ್ ಅಂಪೈರ್ಗೆ ಮನವಿಯನ್ನೂ ಸಹ ಮಾಡಿರಲಿಲ್ಲ. ಒಂದು ವೇಳೆ ಮನವಿ ಸಲ್ಲಿಸಿದರೆ ಅಂಪೈರ್ ಔಟ್ ನೀಡುತ್ತಿದ್ದರು. ಇದರೊಂದಿಗೆ 41 ರನ್ಗೆ ವಿರಾಟ್ ಕೊಹ್ಲಿಯ ಇನಿಂಗ್ಸ್ ಕೂಡ ಕೊನೆಗೊಳ್ಳುತ್ತಿತ್ತು. ಆದರೆ ಇಂತಹದೊಂದು ನಿಯಮ ಇದೆ ಎಂಬುದರ ಪರಿಕಲ್ಪನೆ ಕೂಡ ಪಾಕಿಸ್ತಾನ್ ತಂಡದ ಆಟಗಾರರಿಗೆ ಇರಲಿಲ್ಲ ಎಂಬುದೇ ಸತ್ಯ.
ಏಕೆಂದರೆ ಈ ಹಿಂದೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶ್ ತಂಡದ ಬ್ಯಾಟರ್ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್ ವೇಳೆ ಕೈಯಿಂದ ಚೆಂಡನ್ನು ತಡೆದು ಔಟಾಗಿದ್ದರು. ಅಂದು ಅಂಪೈರ್ ಐಸಿಸಿ ನಿಯಮ 37.4 ರ ಪ್ರಕಾರ ಔಟ್ ಎಂದು ತೀರ್ಪು ನೀಡಿದ್ದರು.
ಮುಶ್ಫಿಕುರ್ ರಹೀಮ್ ಔಟ್ ವಿಡಿಯೋ:
ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!
ಇದೇ ನಿಯಮ ವಿರಾಟ್ ಕೊಹ್ಲಿಯ ವಿಷಯದಲ್ಲೂ ಅನ್ವಯವಾಗುತ್ತಿತ್ತು. ಇದನ್ನೇ ಕಾಮೆಂಟ್ರಿ ಬಾಕ್ಸ್ನಲ್ಲಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೂಡ ಪ್ರಸ್ತಾಪಿಸಿದ್ದರು. ಆದರೆ ಪಾಕಿಸ್ತಾನ್ ತಂಡದ ಆಟಗಾರರಿಗೆ ಇಂತಹದೊಂದು ನಿಯಮ ಇರುವುದೇ ಗೊತ್ತಿರಲಿಲ್ಲ. ಪರಿಣಾಮ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಸುವರ್ಣಾವಕಾಶವನ್ನು ಪಾಕಿಸ್ತಾನ್ ಕೈಚೆಲ್ಲಿಕೊಂಡಿತು. ಇತ್ತ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಕಿಂಗ್ ಕೊಹ್ಲಿ ಆಕರ್ಷಕ ಶತಕ ಬಾರಿಸಿ ಟೀಮ್ ಇಂಡಿಯಾಗೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
Published On - 9:55 am, Tue, 25 February 25
