ತಮಿಳುನಾಡಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸತತ ಎರಡನೇ ಗೆಲುವು ದಾಖಲಿಸಿದೆ. ಗೆಲುವಿಗೆ 166 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ತಿಲಕ್ ವರ್ಮಾ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 165 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತವು 19.2 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 166 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ತಿಲಕ್ ಹೊರತುಪಡಿಸಿ, ವಾಷಿಂಗ್ಟನ್ ಸುಂದರ್ 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 26 ರನ್‌ಗಳ ಕಾಣಿಕೆ ನೀಡಿದರೆ, ಒಂಬತ್ತನೇ ಬ್ಯಾಟ್ಸ್‌ಮನ್ ಆಗಿ ಬಂದ ರವಿ ಬಿಷ್ಣೋಯ್ ಐದು ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಅಜೇಯರಾಗುಳಿದರು.
ಮಂಗಳವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಏಕಪಕ್ಷೀಯ ಪಂದ್ಯಕ್ಕಿಂತ ಭಿನ್ನವಾಗಿ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೊದಲು ಬೌಲಿಂಗ್ ಮಾಡುವಾಗ ಭಾರತದ ಸ್ಪಿನ್ನರ್‌ಗಳು ಆಂಗ್ಲ ಬ್ಯಾಟ್ಸ್‌ಮನ್‌ಗಳನ್ನು ಹಿಡಿತದಲ್ಲಿಟ್ಟರೆ, ಇಂಗ್ಲೆಂಡ್ ತನ್ನ ವೇಗದ ದಾಳಿಯಿಂದ ಟೀಮ್ ಇಂಡಿಯಾವನ್ನು ಹಿಮ್ಮೆಟ್ಟಿಸಿ, ಪಂದ್ಯವನ್ನು ಕೊನೆಯ ಓವರ್‌ವರೆಗೆ ತೆಗೆದುಕೊಂಡು ಹೋಯಿತು. ಆದರೆ ತಿಲಕ್ ವರ್ಮಾ ಮತ್ತು 10 ನೇ ಕ್ರಮಾಂಕದಲ್ಲಿ ಬಂದ ರವಿ ಬಿಷ್ಣೋಯ್ ಅವರು 14 ಎಸೆತಗಳಲ್ಲಿ 20 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಮಾಡಿ 166 ರನ್‌ಗಳ ಗುರಿಯನ್ನು ಸಾಧಿಸಿದರು.
2️⃣-0️⃣ 🙌
Tilak Varma finishes in style and #TeamIndia register a 2-wicket win in Chennai! 👌
Scorecard ▶️ https://t.co/6RwYIFWg7i #INDvENG | @IDFCFIRSTBank pic.twitter.com/d9jg3O02IB
— BCCI (@BCCI) January 25, 2025
ಇಂಗ್ಲೆಂಡ್‌ನ ಬ್ಯಾಟಿಂಗ್ ಆರಂಭ ಮತ್ತೊಮ್ಮೆ ಉತ್ತಮವಾಗಿರಲಿಲ್ಲ. ಮೊದಲ ಓವರ್‌ನಲ್ಲಿಯೇ ಅರ್ಷದೀಪ್ ಸಿಂಗ್ ಸತತ ಎರಡನೇ ಬಾರಿಗೆ ಫಿಲ್ ಸಾಲ್ಟ್ ಅವರನ್ನು ಔಟ್ ಮಾಡಿದರು. ಬೆನ್ ಡಕೆಟ್, ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್ಸ್ಟನ್ ಕೂಡ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಎಂದಿನಂತೆ ಏಕಾಂಗಿ ಹೋರಾಟ ನಡೆಸಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಸತತ ಎರಡನೇ ಪಂದ್ಯದಲ್ಲಿ ತಂಡಕ್ಕೆ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂಬುದನ್ನು ಸಾಬೀತುಪಡಿಸಿದರಾದರೂ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಭಾರತದ ಪರ ಸ್ಪಿನ್ ಮೋಡಿ ಮಾಡಿದ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಆಂಗ್ಲ ಪಡೆಯನ್ನು ಅಲ್ಪ ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಇತ್ತ ಇಂಗ್ಲೆಂಡ್ ನೀಡಿದ 166 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತವು 78 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಹೊಂದಿತ್ತು. ಆದರೆ ತಿಲಕ್ ಹಾಗೂ ವಾಷಿಂಗ್ಟನ್ ಉತ್ತಮ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ವಾಷಿಂಗ್ಟನ್ ಔಟಾದ ನಂತರ, ತಿಲಕ್ ಜವಾಬ್ದಾರಿಯನ್ನು ವಹಿಸಿಕೊಂಡು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು.
ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸ್ ಮೂರು ವಿಕೆಟ್ ಪಡೆದು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ತಿಲಕ್ ಅವರ ಇನ್ನಿಂಗ್ಸ್ ಮುಂದೆ ಅವರ ಪ್ರಯತ್ನಗಳು ವ್ಯರ್ಥವಾಯಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆದಿಲ್ ರಶೀದ್, ಜೇಮೀ ಓವರ್ಟನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 pm, Sat, 25 January 25