
ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ಮಹಿಳಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮಹಿಳಾ ತಂಡವು (India vs Sri Lanka) ಏಕಪಕ್ಷೀಯ ಗೆಲುವು ಸಾಧಿಸಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಟಿ20 ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಗೆಲುವಿನಲ್ಲಿ ರೇಣುಕಾ ಸಿಂಗ್, ದೀಪ್ತಿ ಶರ್ಮಾ ಮತ್ತು ಶೆಫಾಲಿ ವರ್ಮಾ (Shafali Verma) ಪ್ರಮುಖ ಪಾತ್ರವಹಿಸಿದರು. ಈ ಮೂವರ ಅದ್ಭುತ ಪ್ರದರ್ಶನದಿಂದಾಗಿ ಹರ್ಮನ್ ಪಡೆ ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 112 ರನ್ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 14 ನೇ ಓವರ್‌ನಲ್ಲಿ ಜಯದ ನಗೆ ಬೀರಿತು. ತಂಡದ ಪರ ಶೆಫಾಲಿ ವರ್ಮಾ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.
ಎಂದಿನಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಪರ ಆರಂಭಿಕ ಆಟಗಾರ್ತಿ ಹಸಿನಿ ಪೆರೆರಾ (25) ವೇಗದ ಆರಂಭವನ್ನು ನೀಡಿದರು. ರೇಣುಕಾ ಅವರ ಮೊದಲ ಓವರ್‌ನಲ್ಲಿ ಎರಡು ಬೌಂಡರಿಗಳ ಸಹಾಯದಿಂದ 12 ರನ್ ಕಲೆಹಾಕಿದರು. ಆದರೆ ನಾಯಕಿ ಚಾಮರಿ ಅಟಪಟ್ಟು (3) ಅವರನ್ನು ದೀಪ್ತಿ ಔಟ್ ಮಾಡುವ ಮೂಲಕ ಲಂಕಾ ತಂಡಕ್ಕೆ ಮೊದಲ ಹೊಡೆತ ನೀಡಿದರು. ಆ ನಂತರ ರೇಣುಕಾ ತಮ್ಮ ಎರಡನೇ ಸ್ಪೆಲ್‌ನ ಆರನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು. ಮೊದಲು ಫಾರ್ಮ್‌ನಲ್ಲಿರುವ ಹಸಿನಿ ಪೆರೆರಾ ಅವರನ್ನು ಔಟ್ ಮಾಡಿದ ಅವರು ಆ ನಂತರ ಹರ್ಷಿತಾ ಸಮರವಿಕ್ರಮ (2) ಅವರನ್ನು ಪೆವಿಲಿಯನ್ಗಟ್ಟಿದರು.
ಹೀಗಾಗಿ ಲಂಕಾ ಕೇವಲ 32 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ನಂತರ ರೇಣುಕಾ 10 ನೇ ಓವರ್‌ನಲ್ಲಿ ನೀಲಾಕ್ಷಿಕಾ ಸಿಲ್ವಾ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಲಂಕಾ ತಂಡಕ್ಕೆ ಆಘಾತ ನೀಡಿದರು. ಆದಾಗ್ಯೂ ಕವಿಶಾ ದಿಲ್ಹಾರಿ (20) ಮತ್ತು ಇಮೇಶಾ ದುಲಾನಿ 40 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ ಈ ವೇಳೆ ದಾಳಿಗಿಳಿದ ದೀಪ್ತಿ, ದಿಲ್ಹಾರಿಯನ್ನು ಔಟ್ ಮಾಡಿ ತಮ್ಮ 150 ನೇ ಟಿ20 ವಿಕೆಟ್ ಪೂರ್ಣಗೊಳಿಸಿದರು. ನಂತರ ರೇಣುಕಾ ಮತ್ತು ದೀಪ್ತಿ ನಿಯಮಿತ ಅಂತರದಲ್ಲಿ ವಿಕೆಟ್ ಪಡೆದು ಶ್ರೀಲಂಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು.
IND-W vs SL-W: ಶಫಾಲಿ ಸಿಡಿಲಬ್ಬರದ ಬ್ಯಾಟಿಂಗ್; ಟೀಂ ಇಂಡಿಯಾಗೆ ಸತತ 2ನೇ ಗೆಲುವು
ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಮತ್ತೊಮ್ಮೆ ಕಳಪೆ ಆರಂಭ ಸಿಕ್ಕಿತು. ಈ ಸರಣಿಯಲ್ಲಿ ಇದುವರೆಗೆ ಲಯಕಂಡುಕೊಳ್ಳದ ಸ್ಮೃತಿ ಮಂಧಾನ ಈ ಪಂದ್ಯದಲ್ಲೂ ಕೇವಲ 1 ರನ್ಗೆ ಔಟಾದರು. ಇದರ ನಂತರ ಜೆಮಿಮಾ ರೊಡ್ರಿಗಸ್ ಕೂಡ ಕೇವಲ ಒಂಬತ್ತು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮಧ್ಯೆ, ಶೆಫಾಲಿ ವರ್ಮಾ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಅಂತಿಮವಾಗಿ ಅಜೇಯ 79 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಶಫಾಲಿಗೆ ಸಾಥ್ ನೀಡಿದ ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ 21 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಿಬ್ಬರ ಆಟದಿಂದಾಗಿ ಭಾರತ 13.2 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 pm, Fri, 26 December 25