IND vs SA: ಆಫ್ರಿಕಾ ನೆಲದಲ್ಲಿ ಟೆಸ್ಟ್, ಏಕದಿನ ಸರಣಿ ಜೊತೆಗೆ ಟಿ20 ಸರಣಿಯನ್ನು ಆಡಲಿದೆ ಭಾರತ

IND W vs SA W schedule: ಡಿಸೆಂಬರ್‌ನಲ್ಲಿ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಈ ಹಿಂದೆ ನಿಗದಿಯಾಗಿದ್ದ ಏಕದಿನ ಮತ್ತು ಟೆಸ್ಟ್ ಸರಣಿಗೆ, ಇದೀಗ 3 ಪಂದ್ಯಗಳ T20 ಸರಣಿಯನ್ನು ಸೇರಿಸಲಾಗಿದೆ. ಮುಂದಿನ ವರ್ಷದ ಮಹಿಳಾ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಗಾಗಿ ಈ ಬದಲಾವಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿಯಲ್ಲಿ ಟೆಸ್ಟ್ ಪಂದ್ಯದಿಂದ ಪ್ರವಾಸ ಆರಂಭವಾಗಲಿದ್ದು, ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

IND vs SA: ಆಫ್ರಿಕಾ ನೆಲದಲ್ಲಿ ಟೆಸ್ಟ್, ಏಕದಿನ ಸರಣಿ ಜೊತೆಗೆ ಟಿ20 ಸರಣಿಯನ್ನು ಆಡಲಿದೆ ಭಾರತ
Ind Vs Sa Women

Updated on: Aug 06, 2026 | 10:07 PM

ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಭಾರತ ಮಹಿಳಾ ತಂಡ ಬಹು ಮಾದರಿಯ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು (India Women vs South Africa Women) ಕೈಗೊಳ್ಳಲಿದೆ. ಈ ಮೊದಲೇ ಈ ಪ್ರವಾಸದ ವೇಳಾಪಟ್ಟಿ ಬಹಿರಂಗವಾಗಿತ್ತು. ಇದೀಗ ಈ ಪ್ರವಾಸದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ವಾಸ್ತವವಾಗಿ ಈ ಮೊದಲು ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೀಗ ಏಕದಿನ ಹಾಗೂ ಟೆಸ್ಟ್ ಸರಣಿಯ ಜೊತೆಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ಇದೀಗ ಹೊಸ ಮತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರವಾಸದಲ್ಲಿ ಟಿ20 ಸರಣಿ ನಡೆಸುವುದಕ್ಕೂ ಕಾರಣವಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಉದ್ಘಾಟನಾ ಮಹಿಳಾ ಚಾಂಪಿಯನ್ಸ್ ಟ್ರೋಫಿಯ ತಯಾರಿಯ ದೃಷ್ಟಿಯಿಂದ ಎರಡು ತಂಡಗಳಿಗೆ ಇದು ಈ ಸರಣಿ ಸಹಾಯಕವಾಗಲಿದೆ.

ಟೆಸ್ಟ್ ಪಂದ್ಯದೊಂದಿಗೆ ಪ್ರವಾಸ ಆರಂಭ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವು ಮೂಲತಃ ಡಿಸೆಂಬರ್ 9 ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಆರಂಭವಾಗಬೇಕಿತ್ತು. ಇದರ ನಂತರ ಡಿಸೆಂಬರ್ 20 ರಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಆದಾಗ್ಯೂ, ಹೊಸ ವೇಳಾಪಟ್ಟಿಯ ಪ್ರಕಾರ, ಪ್ರವಾಸವು ಈಗ ಡಿಸೆಂಬರ್ 9 ರಂದು ಅದೇ ಸ್ಥಳದಲ್ಲಿ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ಇದರ ನಂತರ, ಎರಡೂ ತಂಡಗಳು ಸೀಮಿತ ಓವರ್‌ಗಳ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಏಕದಿನ ಮತ್ತು ಟಿ20 ಸರಣಿ ವೇಳಾಪಟ್ಟಿ

ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ತಂಡಗಳ ನಡುವಿನ ಸೀಮಿತ ಓವರ್‌ಗಳ ಪಂದ್ಯಗಳು ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿವೆ. ಈ ಪಂದ್ಯಗಳು ಪಾರ್ಲ್, ಕೇಪ್ ಟೌನ್ ಮತ್ತು ಬ್ಲೂಮ್‌ಫಾಂಟೈನ್‌ನಲ್ಲಿ ನಡೆಯಲಿವೆ. ಏಕದಿನ ಸರಣಿಯ ಮುಕ್ತಾಯದ ನಂತರ, ಎರಡೂ ತಂಡಗಳು ಟಿ20 ಸರಣಿಯಲ್ಲಿ ಆಡಲಿವೆ. ಮೊದಲ ಏಕದಿನ ಪಂದ್ಯ ಡಿಸೆಂಬರ್ 16 ರಂದು, ಎರಡನೇ ಪಂದ್ಯ ಡಿಸೆಂಬರ್ 19 ರಂದು ಮತ್ತು ಅಂತಿಮ ಏಕದಿನ ಪಂದ್ಯ ಡಿಸೆಂಬರ್ 22 ರಂದು ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಂದು ಬೆನೋನಿಯಲ್ಲಿ ನಡೆಯಲಿದೆ, ಉಳಿದ ಎರಡು ಟಿ20 ಪಂದ್ಯಗಳು ಡಿಸೆಂಬರ್ 29 ಮತ್ತು 30 ರಂದು ಸತತ ಎರಡು ದಿನಗಳಲ್ಲಿ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆಯಲಿವೆ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ವೇಳಾಪಟ್ಟಿ

  • ಏಕೈಕ ಟೆಸ್ಟ್: ಡಿಸೆಂಬರ್ 9-12, ಗ್ಕೆಬರಾಹಾ

ಏಕದಿನ ಸರಣಿ

  • ಮೊದಲ ಏಕದಿನ ಪಂದ್ಯ: ಡಿಸೆಂಬರ್ 16, ಪಾರ್ಲ್
  • ಎರಡನೇ ಏಕದಿನ ಪಂದ್ಯ: ಡಿಸೆಂಬರ್ 19, ಕೇಪ್ ಟೌನ್
  • ಮೂರನೇ ಏಕದಿನ ಪಂದ್ಯ: ಡಿಸೆಂಬರ್ 22, ಬ್ಲೂಮ್‌ಫಾಂಟೈನ್

ಟಿ20 ಸರಣಿ

  • ಮೊದಲ ಟಿ20: ಡಿಸೆಂಬರ್ 26, ಬೆನೋನಿ
  • ಎರಡನೇ ಟಿ20: ಡಿಸೆಂಬರ್ 29, ಪೊಚೆಫ್‌ಸ್ಟ್ರೂಮ್
  • ಮೂರನೇ ಟಿ20: ಡಿಸೆಂಬರ್ 30, ಪೊಚೆಫ್‌ಸ್ಟ್ರೂಮ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us