IND vs ENG: ಭಾರತದ ವಿರುದ್ಧ 20 ವರ್ಷಗಳ ಹಳೆಯ ದಾಖಲೆ ಮುರಿದ ಇಂಗ್ಲೆಂಡ್‌ ಜೋಡಿ

India Women vs England Women ODI: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 258 ರನ್ ಗಳಿಸಿದೆ. ಕಳಪೆ ಆರಂಭ ಪಡೆದ ಇಂಗ್ಲೆಂಡ್, ಡಂಕ್ಲಿ ಮತ್ತು ರಿಚರ್ಡ್ಸನ್ ಅವರ ಶತಕದ ಜೊತೆಯಾಟದಿಂದ ಉತ್ತಮ ಮೊತ್ತವನ್ನು ಕಲೆಹಾಕಿತು. ಈ ಮೂಲಕ ಈ ಜೋಡಿ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಭಾರತದ ಪರ ಕ್ರಾಂತಿ ಮತ್ತು ಸ್ನೇಹಾ ತಲಾ ಎರಡು ವಿಕೆಟ್ ಪಡೆದರು

IND vs ENG: ಭಾರತದ ವಿರುದ್ಧ 20 ವರ್ಷಗಳ ಹಳೆಯ ದಾಖಲೆ ಮುರಿದ ಇಂಗ್ಲೆಂಡ್‌ ಜೋಡಿ
Dunkley, Richardson

Updated on: Jul 16, 2025 | 10:28 PM

ಪ್ರಸ್ತುತ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ಮಹಿಳಾ ತಂಡ, ಆತಿಥೇಯ ತಂಡದ (India Women vs England Women) ವಿರುದ್ಧ ಟಿ20 ಹಾಗೂ ಏಕದಿನ ಸರಣಿಯನ್ನು ಆಡುತ್ತಿದೆ. ಈ ಮೊದಲು ನಡೆದಿದ್ದ ಟಿ20 ಸರಣಿಯನ್ನು ಭಾರತ ತಂಡ 3-2 ಅಂತರದಿಂದ ವಶಪಡಿಸಿಕೊಂಡು ಇತಿಹಾಸ ಸೃಷ್ಟಿಸಿತ್ತು. ಇದೀಗ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಿದ್ದು, ಮೊದಲ ಪಂದ್ಯ ಸೌತಾಂಪ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡವು 6 ವಿಕೆಟ್‌ಗಳ ನಷ್ಟಕ್ಕೆ 258 ರನ್ ಕಲೆಹಾಕಿದೆ. ತಂಡದ ಪರ ಶತಕದ ಜೊತೆಯಾಟ ನಡೆಸಿದ್ದ ಆಲಿಸ್ ಡೇವಿಡ್ಸನ್ (Davidson-Richards) ಮತ್ತು ಸೋಫಿಯಾ ಡಂಕ್ಲಿ (Sophia Dunkley) ತಂಡವನ್ನು ಈ ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರ ಜೊತೆಗೆ ಐದನೇ ವಿಕೆಟ್‌ಗೆ 106 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ಈ ಜೋಡಿ 20 ವರ್ಷಗಳ ಹಳೆಯ ದಾಖಲೆಯನ್ನು ಸಹ ಮುರಿಯಿತು.

ಡಂಕ್ಲಿ- ರಿಚರ್ಡ್ಸನ್ ಜೊತೆಯಾಟ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 100 ರನ್​ಗಳ ಗಡಿ ದಾಟುವ ಮುನ್ನವೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆ ಬಳಿಕ ಜೊತೆಯಾದ ಡಂಕ್ಲಿ ಮತ್ತು ರಿಚರ್ಡ್ಸನ್ ಜೋಡಿ ಐದನೇ ವಿಕೆಟ್​ಗೆ ಶತಕದ ಜೊತೆಯಾಟವನ್ನಾಡಿತು. ಈ ಮೂಲಕ ಭಾರತದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಐದನೇ ವಿಕೆಟ್‌ಗೆ ಅತ್ಯಧಿಕ ಪಾಲುದಾರಿಕೆ ರಚಿಸಿದ ದಾಖಲೆಯನ್ನು ಸೃಷ್ಟಿಸಿತು. ಈ ಮೊದಲು ಈ ದಾಖಲೆ ಲಿಡಿಯಾ ಗ್ರೀನ್‌ವೇ ಮತ್ತು ಆರನ್ ಬ್ರಿಂಡಲ್ ಹೆಸರಿನಲ್ಲಿತ್ತು. ಈ ಜೋಡಿ 2005 ರಲ್ಲಿ ನಡೆದ ಪಂದ್ಯದಲ್ಲಿ ಐದನೇ ವಿಕೆಟ್​ಗೆ 89 ರನ್‌ಗಳ ಜೊತೆಯಾಟ ನಡೆಸಿತ್ತು. ಆದರೆ ಈಗ 20 ವರ್ಷಗಳ ನಂತರ, ಡಂಕ್ಲಿ ಮತ್ತು ರಿಚರ್ಡ್ಸನ್ ಜೋಡಿ 106 ರನ್‌ಗಳ ಜೊತೆಯಾಟ ನಡೆಸುವ ಮೂಲಕ ಆ ದಾಖಲೆ ಮುರಿದಿದೆ.

ಇಂಗ್ಲೆಂಡ್ ತಂಡಕ್ಕೆ ಕಳಪೆ ಆರಂಭ

ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ಓವರ್‌ನಲ್ಲಿ, ಆಮಿ ಜೋನ್ಸ್ 1 ರನ್ ಗಳಿಸಿ ಔಟಾದರು. ಇದಾದ ನಂತರ ಟ್ಯಾಮಿ ಬ್ಯೂಮಾಂಟ್ ಕೂಡ 5 ರನ್ ಗಳಿಸಿ ಔಟಾದರು, ಆ ಸಮಯದಲ್ಲಿ ತಂಡದ ಸ್ಕೋರ್ ಕೇವಲ 20 ರನ್‌ಗಳಾಗಿತ್ತು. ಎರಡು ವಿಕೆಟ್‌ಗಳು ಬೇಗನೆ ಬಿದ್ದ ನಂತರ, ಎಮ್ಮಾ ಲ್ಯಾಂಬ್ ಮತ್ತು ನ್ಯಾಟ್ ಸೆವಾರ್ಡ್ ಬ್ರಂಟ್ ಇಂಗ್ಲೆಂಡ್ ಇನ್ನಿಂಗ್ಸ್ ನಿಭಾಯಿಸಿದರು. ಲ್ಯಾಂಬ್ 39 ರನ್ ಗಳಿಸಿದರೆ, ಬ್ರಂಟ್ 52 ಎಸೆತಗಳಲ್ಲಿ 41 ರನ್‌ಗಳ ಇನ್ನಿಂಗ್ಸ್ ಆಡಿದರು.

IND vs SL: ಆಗಸ್ಟ್‌ನಲ್ಲಿ ಭಾರತ- ಶ್ರೀಲಂಕಾ ನಡುವೆ ಏಕದಿನ, ಟಿ20 ಸರಣಿ

ಡಂಕ್ಲಿ- ರಿಚರ್ಡ್ಸನ್ ಅದ್ಭುತ ಇನ್ನಿಂಗ್ಸ್

ಒಂದು ಹಂತದಲ್ಲಿ ಇಂಗ್ಲೆಂಡ್ 97 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಸೋಫಿಯಾ ಡಂಕ್ಲಿ ಮತ್ತು ಡೇವಿಡ್ಸನ್ ರಿಚರ್ಡ್ಸ್ ಜವಾಬ್ದಾರಿ ವಹಿಸಿಕೊಂಡರು. ಡಂಕ್ಲಿ 92 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 83 ರನ್ ಗಳಿಸಿದರೆ, ರಿಚರ್ಡ್ಸನ್ 73 ಎಸೆತಗಳಲ್ಲಿ 53 ರನ್​ಗಳ ಕಾಣಿಕೆ ನೀಡಿದರು. ಈ ಇಬ್ಬರಿಂದಾಗಿಯೇ ಇಂಗ್ಲೆಂಡ್ ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಯಿತು. ಭಾರತದ ಪರ ಕ್ರಾಂತಿ ಗೌಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ